ವಿಷಯಕ್ಕೆ ಹೋಗು

ಈಡಿಪಸ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಈಡಿಪಸ್[][] ಪ್ರಾಚೀನ ಗ್ರೀಕ್ ಪುರಾಣಗಳಲ್ಲಿನ ನಾಯಕ ಶಿಖಾಮಣಿಗಳಲ್ಲೊಬ್ಬ. ಇವನ ವೃತ್ತಾಂತ ಅತ್ಯಂತ ಭಯಾನಕವೂ ರೋಮಾಂಚಕಾರವೂ ಸಮಸ್ಯಾತ್ಮಕವೂ ಜಟಿಲವೂ ದುರಂತಮಯವೂ ಆಗಿದೆ. ಗ್ರೀಕ್ ಪುರಾಣದ ಪ್ರಕಾರ ಈಡಿಪಸ್ ಥೀಬ್ಸ್ ರಾಜ್ಯದ ದೊರೆ. ಗೊತ್ತಿಲ್ಲದೆ ತಂದೆಯನ್ನೇ ಕೊಂದು ತಾಯಿಯನ್ನೇ ಮದುವೆಯಾದ ವ್ಯಕ್ತಿ. ಈಡಿಪಸ್ ಥೀಬ್ಸ್‍ನ ದೊರೆಯಾಗಿ ಸಾಯುವತನಕ ರಾಜ್ಯಭಾರ ಮಾಡಿದನಾದರೂ ತಮ್ಮಿಬ್ಬರಿಗೂ ಇರುವ ಸಂಬಂಧದಲ್ಲಿನ ಸತ್ಯ ತಿಳಿದಾಗ ಅವನ ತಾಯಿ ಹೇಗೆ ನೇಣುಹಾಕಿಕೊಂಡಳು ಎಂಬುದನ್ನು ಹೋಮರ್ ಕವಿಯೇ ಉಲ್ಲೇಖಿಸುತ್ತಾನೆ.

ಗ್ರೀಸಿನ ದೊರೆ ಲಯಸ್‍ಗೆ, ಅವನ ಮಗನಿಂದಲೆ ಕೊಲೆಯಾಗುತ್ತದೆಂದು ದಿವ್ಯವಾಣಿಯೊಂದು ಭವಿಷ್ಯ ನುಡಿದಿರುತ್ತದೆ. ಇದನ್ನು ತಿಳಿದ ರಾಜ, ತನಗೊಂದು ಮಗುವಾದಾಗ ಅದರ ಪಾದಗಳನ್ನು ಮೊನಚಾದ ಲೋಹದ ಮೊಳೆಯಿಂದ ಚುಚ್ಚಿ ಗಾಯಮಾಡಿ ಸಾಯಲು ಹೊರಹಾಕಿಬಿಡುತ್ತಾನೆ. ಮಗುವನ್ನು ಮತ್ತಾರೂ ಕಾಪಾಡಕೂಡದೆಂದೂ ಅದರ ದೆವ್ವ ಸಹ ಸುಳಿಯದಂತೆ ನೋಡಿಕೊಳ್ಳತಕ್ಕದೆಂದೂ ಕಟ್ಟಪ್ಪಣೆ ಮಾಡುತ್ತಾನೆ. ಆದರೆ ದೈವೇಚ್ಛೆ ಬೇರೊಂದು ತೆರನಾಗಿತ್ತು. ಕಾರಿಂಥಿನ ದೊರೆ ಪಾಲಿಬಸ್‍ನ ಕಡೆಯ ಕುರುಬನೊಬ್ಬ ಮಗುವನ್ನು ನೋಡಿ ಕನಿಕರಪಟ್ಟು, ಅದನ್ನು ತೆಗೆದುಕೊಂಡು ಹೋಗಿ ಪಾಲಿಬಸ್‍ನ ರಾಣಿಗೆ ಕೊಟ್ಟ. ಪಾಲಿಬಸ್ ಮತ್ತು ಅವನ ರಾಣಿ ಈ ಮಗುವನ್ನು ತಮ್ಮದೆಂದೇ ತಿಳಿದು ಸಾಕಿದರು. ಪಾದಗಳು ಊದಿಕೊಂಡಿದ್ದರಿಂದ, ಈ ಮಗುವಿಗೆ ಈಡಿಪಸ್ ಎಂಬ ಹೆಸರನ್ನು ಅವರೇ ಕೊಟ್ಟರು. ಈಡಿಪಸ್ ಬೆಳೆದು ಪ್ರಾಯಕ್ಕೆ ಬಂದಾಗ, ಅವನ ಸಂದೇಹಾಸ್ಪದ ವಂಶವೃತ್ತಾಂತದ ಬಗ್ಗೆ ಕುಡುಕನೊಬ್ಬ ಹಂಗಿಸಿದ. ಆಗ ತನ್ನ ನಿಜವಾದ ತಂದೆತಾಯಿಗಳನ್ನು ಪತ್ತೆ ಹಚ್ಚಲು ಈಡಿಪಸ್ ಗ್ರೀಸಿನ ಭವಿಷ್ಯವಾಣಿಯ ಸ್ಥಳವಾದ ಡೆಲ್ಫಗೆ ಬಂದ. ಅಲ್ಲಿನ ಗ್ರೀಕರ ಸೂರ್ಯದೇವತೆ ಅಪೊಲೊ ಮುಂದೆ ಈಡಿಪಸ್ ತನ್ನ ತಂದೆಯನ್ನು ಕೊಂದು ತಾಯಿಯನ್ನು ಮದುವೆಯಾಗುವ ಭವಿಷ್ಯವನ್ನು ತಿಳಿಸಿತು. ಈಡಿಪಸ್ ಕಾರಿಂಥಿಗೆ ವಾಪಸಾಗದೆ, ಥೀಬ್ಸ್ ಕಡೆಗೆ ಪ್ರಯಾಣ ಬೆಳೆಸಿದ.[]

ದಾರಿಯಲ್ಲಿ ಲಯಸ್‍ನನ್ನು ಸಂಧಿಸಿದ. ಇಬ್ಬರ ನಡುವೆ ಮಾತಿಗೆ ಮಾತು ಬೆಳೆಯಿತು. ದ್ವಂದ್ವಯುದ್ಧ ಮೊದಲಾಯಿತು. ಈಡಿಪಸ್ ಲಯಸ್‍ನನ್ನು ಕೊಂದುಹಾಕಿದ. ಆದರೆ ಸತ್ತವನು ತನ್ನ ತಂದೆ ಎಂಬುದು ಈಡಿಪಸ್‍ಗೆ ತಿಳಿಯದು. ಹೀಗೆ ತಂದೆಯನ್ನು ಕೊಂದು ಪ್ರಯಾಣ ಮುಂದುವರಿಸಿದಾಗ ಸ್ಫಿಂಕ್ಸ್ ರಾಕ್ಷಸಿಯಿಂದ ಥೀಬ್ಸ್‍ಗೆ ಆಗುತ್ತಿದ್ದ ಉಪದ್ರವದ ವಿಚಾರ ಈಡಿಪಸ್‍ಗೆ ಗೊತ್ತಾಯಿತು. ಗ್ರೀಕ್ ಪುರಾಣದ ಪ್ರಕಾರ ಸ್ಫಿಂಕ್ಸ್ ಒಂದು ಅದ್ಭುತ ಪ್ರಾಣಿ. ಅದಕ್ಕೆ ಹೆಂಗಸಿನ ತಲೆಯೂ ಸಿಂಹದ ಒಡಲೂ ರೆಕ್ಕೆಗಳೂ ಇದ್ದುವು. ತನ್ನೆಡೆಗೆ ಸುಳಿದವರಿಗೆಲ್ಲ ಬಿಡಿಸಲಾರದ ಒಗಟೊಂದನ್ನು ಒಡ್ಡಿ ಅವರನ್ನು ಈ ರಾಕ್ಷಸಿ ಕೊಲ್ಲುತ್ತಿತ್ತು. "ಬೆಳಗ್ಗೆ ನಾಲ್ಕು ಕಾಲಿನಲ್ಲಿ, ಮಧ್ಯಾಹ್ನ ಎರಡು ಕಾಲಿನಲ್ಲಿ, ಸಂಜೆ ಮೂರು ಕಾಲಿನಲ್ಲಿ ನಡೆವ ಪ್ರಾಣಿ ಯಾವುದು?" ಎಂಬುದೇ ಅದರ ಒಗಟು. ಮನುಷ್ಯನೆಂಬುದೇ ಅದರ ಅರ್ಥವಾದರೂ ಯಾರೂ ಆ ತನಕ ಉತ್ತರ ಹೇಳಿ ಜೀವಂತ ಪಾರಾದವರಿರಲಿಲ್ಲ. ಇಲ್ಲಿ ಬೆಳಗ್ಗೆ, ಮಧ್ಯಾಹ್ನ, ಸಾಯಂಕಾಲಗಳಿಗೆ ಜೀವನದ ಮೂರು ಘಟ್ಟಗಳಾದ ಬಾಲ್ಯ, ಯೌವನ ಮತ್ತು ಮುಪ್ಪು ಎಂಬ ಅರ್ಥವಿದೆ. ಈಡಿಪಸ್ ಅಲ್ಲಿಗೆ ಬಂದು ಸ್ಫಿಂಕ್ಸ್ ರಾಕ್ಷಸಿ ಒಡ್ಡಿದ್ದ ಒಗಟನ್ನು ಬಿಡಿಸುತ್ತಾನೆ. ಇದರಿಂದ ಆ ರಾಕ್ಷಸಿ ತನ್ನನ್ನೇ ತಾನು ಕೊಂದುಕೊಂಡು ಸತ್ತುಹೋಗುತ್ತದೆ. ಒಗಟನ್ನು ಬಿಡಿಸಿ, ಸ್ಫಿಂಕ್ಸ್ ರಕ್ಕಸಿಯನ್ನು ಕೊಂದವರಿಗೆ ಆ ರಾಜ್ಯ ಮತ್ತು ಅದರ ರಾಣಿ ಉಡುಗೊರೆಯಾಗಬೇಕೆಂದು ಮೊದಲೇ ನಿಗದಿಯಾಗಿರುತ್ತದೆ. ಈಡಿಪಸ್ ಥೀಬ್ಸ್‍ನ ಸಿಂಹಾಸನವನ್ನೂ ವಿಧವೆ ರಾಣಿ-ಅರ್ಥಾತ್ ತಾಯಿ-ಇಯೊಕಾಸ್ಟೆಯನ್ನೂ ಬಹುಮಾನವಾಗಿ ಪಡೆಯುತ್ತಾನೆ.

ಈಡಿಪಸ್ ಮತ್ತು ಇಯೊಕಾಸ್ಟೆ ಬಹಳ ಕಾಲ ಸಹಬಾಳ್ವೆ ನಡೆಸಿದರು. ಅವರಿಗೆ ಈಟಿಯೊಕ್ಲಿಸ್, ಪಾಲಿನೀಸಸ್, ಅಂತಿಗೊನೆ ಮತ್ತು ಇಸ್ಮೇನೆ ಎಂಬ ನಾಲ್ವರು ಮಕ್ಕಳೂ ಆದರು. ಕಡೆಗೆ ಒಂದು ಸಾರಿ ಆ ರಾಜ್ಯಕ್ಕೆ ಕ್ಷಾಮ ತಲೆದೋರಿತೆಂದೂ ಅದಕ್ಕೆ ಇವರಿಬ್ಬರ ಅಕ್ರಮ ಸಂಬಂಧದ ಪಾಪವೇ ಕಾರಣವೆಂದೂ ಭವಿಷ್ಯವಾಣಿ ಹೇಳಿತೆಂದು ಪುರಾಣ ಕಥೆಯ ಸಾಮಾನ್ಯ ಪಾಠ ತಿಳಿಸುತ್ತದೆ. ಇದರಿಂದ ಸತ್ಯ ಬೆಳಕು ಕಂಡಿತು. ಆಗ ಇಯೊಕಾಸ್ಟೆ ಆತ್ಮಹತ್ಯೆ ಮಾಡಿಕೊಂಡಳು. ಈಡಿಪಸ್ ಉದ್ವಿಗ್ನನಾಗಿ ಪಶ್ಚಾತ್ತಾಪರೂಪವಾಗಿ ಕಣ್ಣುಕಿತ್ತುಕೊಂಡ. ಆಮೇಲೆ ಈಡಿಪಸ್ ತನ್ನ ಭಾವನನ್ನು ರಾಜಪ್ರತಿನಿಧಿಯಾಗಿ ನೇಮಿಸಿ, ತನ್ನಿಬ್ಬರು ಮಕ್ಕಳು ಅಂತಿಗೊನೆ ಮತ್ತು ಇಸ್ಮೇನೆಯರೊಡನೆ ದೇಶಭ್ರಷ್ಠನಾದಂತೆ ತಿಳಿದುಬರುತ್ತದೆ. ಕಡೆಗೆ ಅಥೆನ್ಸಿನ ಸಮೀಪದ ಕೊಲೊನಸ್‍ನಲ್ಲಿ ಈಡಿಪಸ್‍ನ ಅಂತ್ಯ ಸಂಭವಿಸಿತೆಂದೂ ಭೂಮಿ ಬಾಯಿ ಬಿಟ್ಟು ಅವನನ್ನು ಒಳಕೊಂಡಿತೆಂದೂ ಪ್ರತೀತಿ. ಆಮೇಲೆ ಈಡಿಪಸ್ ಆ ಪ್ರದೇಶದ ರಕ್ಷಕವೀರನಾದನೆಂದೂ ಕಥೆ ಇದೆ.

ಈಡಿಪಸ್ ಐತಿಹ್ಯದಲ್ಲಿ ಚಾರಿತ್ರಿಕ ಸತ್ಯಸಂಗತಿ ಇರುವುದಾದರೂ ಜನಪದ ಕಥಾಂಶಗಳಿಂದ ಅದನ್ನು ಬೇರ್ಪಡಿಸಲು ಸಾಧ್ಯವಾಗುತ್ತಿಲ್ಲ. ಆಬ್ಬೇನಿಯ, ಫಿನ್ಲೆಂಡ್, ಸೈಪ್ರಸ್, ಗ್ರೀಸ್ ಮೊದಲಾದ ದೇಶಗಳಲ್ಲಿ ಅಪ್ಪಟ ಈಡಿಪಸ್ ಜಾನಪದ ಸಂಪ್ರದಾಯವನ್ನು ಕಾಣಬಹುದು. ಮಧ್ಯಯುಗದ ಕೆಲವು ಕೃತಿಗಳಲ್ಲಿ ಇದರ ಸ್ಥಳಾಂತರೀಕರಣ ನಡೆದಿರುವುದೂ ಉಂಟು. ಈಡಿಪಸ್ ಪುರಾತನ ಕಥೆಯಲ್ಲಿ ನಾಟಕೀಯ ತೀವ್ರತೆ ಬಹುವಾಗಿದ್ದು ಪುರಾತನ ಕಲೆಯಲ್ಲಿ ಈ ಸಂಗತಿ ಚಿತ್ರಿತವಾಗಿರುವುದು ಮಾತ್ರವಲ್ಲದೆ, ಕಾನೈಲ್ಲೆ, ಡ್ರೈಡನ್, ವಾಲ್ಟೇರರನ್ನೂ ಸೇರಿಸಿಕೊಂಡು ಹಲವು ನಾಟಕಕಾರರಿಗೆ ಬಹುಕಾಲ ನಾಟಕದ ವಸ್ತುವಾಗಿತ್ತು ಎಂಬುದು ತಿಳಿದ ಸಂಗತಿಯೇ ಆಗಿದೆ. ಇಪ್ಪತ್ತನೆಯ ಶತಮಾನದಲ್ಲೂ ಇದು ವಿಶೇಷ ಆಕರ್ಷಣೆಗೆ ಗುರಿಯಾಗಿದ್ದು, ಹಲವು ಲೇಖಕರಿಗೆ ಸ್ಫೂರ್ತಿನೀಡಿರುವುದು ಉಲ್ಲೇಖನೀಯ.

ಫ್ರಾಯ್ಡ್ ತನ್ನ ಸಿದ್ಧಾಂತವೊಂದಕ್ಕೆ ಈ ಕಥೆಯನ್ನು ಆಧಾರ ಮಾಡಿಕೊಂಡು ಅದಕ್ಕೆ ಈಡಿಪಸ್ ಕಾಂಪ್ಲೆಕ್ಸ್ (ನೋಡಿ- ಈಡಿಪಸ್-ಕಾಂಪ್ಲೆಕ್ಸ್) ಎಂದು ಹೆಸರಿಟ್ಟಿದ್ದು ಗಮನಾರ್ಹ ಅಂಶವಾಗಿದೆ.

ಈಡಿಪಸ್ ಕಥೆಯಲ್ಲಿ ಹಲವಾರು ಪಾಠಾಂತರಗಳು ಕಾಣಬರುತ್ತವೆ. ಜನಪದ ಕಥೆಯಲ್ಲಿ ರೂಪಾಂತರ ಸಾಧ್ಯತೆ ಒಂದು ಸಾಮಾನ್ಯ ಲಕ್ಷಣ. ಈ ಕಥೆ ಇದಕ್ಕೆ ಹೊರತಾಗಿಲ್ಲ. ಈಡಿಪಸ್ ಕಥೆಯಲ್ಲಿ ಹಲವು ಸಂಪ್ರದಾಯಗಳಿದ್ದು, ಒಂದೊಂದು ವಿಶೇಷ ಸಂಗತಿಯನ್ನು ಆಸ್ಫೋಟಿಸುತ್ತದೆ. ಈಗ ಅಂಥ ಕೆಲವನ್ನು ಗುರುತಿಸಬಹುದು. ಇಯೊಕಾಸ್ಟೆಯ ಆತ್ಮಹತ್ಯೆಯಾಗಲಿ, ಈಡಿಪಸ್‍ನ ದೇಶಭ್ರಷ್ಟತೆಯಾಗಲಿ ಕೆಲವು ಪಾಠಾಂತರಗಳ ಪ್ರಕಾರ ಘಟನೆಯ ಸಮೀಪ ಕಾಲದಲ್ಲಿ ನಡೆದಿರಬೇಕೆಂದು ತಿಳಿದುಬರುತ್ತದೆ. ಆದರೆ ಇನ್ನು ಕೆಲವಲ್ಲಿ ಈ ಎರಡು ಘಟನೆಗಳಿಗೂ ನಡುವೆ ಕೆಲವು ವರ್ಷಗಳೇ ಕಳೆದುಹೋಗಿರಬೇಕೆಂದು ಗೊತ್ತಾಗುತ್ತದೆ. ಈಡಿಪಸನ ನಾಲ್ಕುಜನ ಮಕ್ಕಳು ಅವನ ಮೊದಲ ಹೆಂಡತಿ ಅರ್ಥಾತ್ ತಾಯಿ ಇಯೊಕಾಸ್ಟೆಗೆ ಹುಟ್ಟಿದವರೊ ಅಥವಾ ಅವನ ಎರಡನೆಯ ಹೆಂಡತಿ ಈರಿಗನೇಯಾ ಅಥವಾ ಅಸ್ಟಿಮಿಡುಸಿಗೆ ಹುಟ್ಟಿದವರೊ ತಿಳಿಯದು. ಇದರ ಇನ್ನೊಂದು ತೊಡಕೆಂದರೆ ಕಥೆಯ ಅಂತ್ಯವನ್ನು ಕುರಿತದ್ದು. ಅಥೇನಿಯದ ಲೇಖಕರು ಅಟಿಕದಲ್ಲಿ ಈ ಕಥೆ ಕೊನೆಗೊಂಡಿತೆಂದು ಹೇಳಿ ಸಮಸ್ಯೆಯನ್ನು ಮತ್ತಷ್ಟು ತೊಡಕುಮಾಡಿದ್ದಾರೆ. ಕುರುಡ ಈಡಿಪಸನನ್ನು ಭೂಮಿ ಒಳಗೊಂಡ ವಿಚಾರದ ಬಗ್ಗೆ ಇನ್ನೊಂದು ಸಂಪ್ರದಾಯ ಪ್ರಚಲಿತವಾಗಿದೆ. ಥೀಬ್ಸಿನ ದನಗಳನ್ನು ದಾಳಿಕಾರರಿಂದ ರಕ್ಷಿಸುವಾಗ ಪ್ರಾಯಶಃ ನಡೆದ ಯುದ್ಧದಲ್ಲಿ ಈಡಿಪಸ್ ಮಡಿದಿರಬೇಕೆಂಬುದೇ ಅದು. ಇಷ್ಟಾದರೂ ಅವನ ಶವಸಂಸ್ಕಾರ ಥೀಬ್ಸಿನಲ್ಲಿ ನಡೆಯದೆ ಬೇರೆ ಕಡೆ ನಡೆದಂತೆ ತಿಳಿದು ಬರುತ್ತದೆ. ಅವನ ಸಮಾಧಿಯ ಪರಿಸರದಲ್ಲಿ ವಾಸಿಸಿದರೆ ವಿಪತ್ತು ಬರುತ್ತದೆ ಎಂಬುದೇ ಆ ಜನ ಅವನ ಶವ ಸಂಸ್ಕಾರ ಸ್ಥಳಕ್ಕೆ ಪ್ರವೇಶಿಸದಿರಲು ಕಾರಣವಾಗಿರಬೇಕು. ಕಡೆಗೆ ದೇವತೆಯ ಆಜ್ಞೆಯ ಪ್ರಕಾರವಾಗಿ ಎಟಿಯೊನಸನ ಡೆಮೆಟರ್ ಎಂಬ ಪವಿತ್ರಸ್ಥಳದಲ್ಲಿ ಆತನ ಸಮಾಧಿಯಾದಂತೆ ಕಥೆಯೊಂದು ತಿಳಿಸುತ್ತದೆ. ಪ್ರಾಚೀನ ಜಗತ್ತಿನಲ್ಲಿ ಈ ಸ್ಥಳ ತುಂಬ ಪ್ರಸಿದ್ಧಿ ಪಡೆದುಕೊಂಡಿತ್ತಂತೆ. ಇಲ್ಲಿ ಗಮನಿಸಬಹುದಾದ ಮತ್ತೊಂದು ವಿಚಾರವೆಂದರೆ, ಥೀಬ್ಸಿನ ರಾಜರು ದುರಂತತೆಯ ಶಿಕ್ಷೆಗೆ ಗುರಿಯಾಗಬೇಕಾಗಿ ಬಂದುದಕ್ಕೆ ಪೆಲೋಪ್ಸ್ ಕೊಟ್ಟ ಶಾಪವೂ ಒಂದಾಗಿದೆ ಎಂಬುದು. ಇಂಥ ಹಲವಾರು ಸಂಗತಿಗಳಿಂದ ಈಡಿಪಸ್ ಕಥೆ ಅತ್ಯಂತ ಕ್ಲಿಷ್ಟವಾಗಿದೆ. ಈ ಎಲ್ಲ ವಿಷಯಗಳ ಅಧ್ಯಯನದಿಂದ ಇಷ್ಟನ್ನು ಮಾತ್ರ ಹೇಳಬಹುದು. ಪುರಾಣಕಾವ್ಯಗಳ ಆವರ್ತದಲ್ಲಿ ಸಿಕ್ಕಿ ಈ ಕಥೆ ಪ್ರಾರಂಭದಲ್ಲಿ ಒಂದು ರೂಪ ತಾಳಿದುದು ನಿಸ್ಸಂಶಯವಾದರೂ ಹೋಮರನ ಅನಂತರದ ಸಂಪ್ರದಾಯದಲ್ಲಿ, ಬಹುತೇಕವಾಗಿ ನಮಗೆ ಗೊತ್ತಿರುವ ಸೋಫಕ್ಲೀಸನ ಈಡಿಪಸ್ ರೆಕ್ಸ್ ಮತ್ತು ಈಡಿಪಸ್ ಕಾಲೊನಿಯಸುಗಳಿಂದ ಕಥೆಯಲ್ಲಿ ಭಿನ್ನರೂಪಗಳು ಕಾಣಿಸಿಕೊಂಡಿರಬೇಕು.

ಈಡಿಪಸ್ ಕಥೆ ಹಲವು ಆಶಯಗಳಿಂದ ಘಟಿತವಾದದ್ದು, ಭವಿಷ್ಯವಾಣಿ, ಮಗುವಿನ ಪಾದಗಳನ್ನು ಇರಿಯುವುದು, ತ್ಯಜಿಸಿದ ಮಗುವನ್ನು ಬೇರೊಬ್ಬರು ಸಾಕಿಕೊಳ್ಳುವುದು, ತಂದೆಯನ್ನು ಕೊಲ್ಲುವುದು, ಇಯೊಕಾಸ್ಟೆಯ ಆತ್ಮಹತ್ಯೆ, ಈಡಿಪಸ್ ಕಣ್ಣು ಕಳೆದುಕೊಂಡು ದೇಶಭ್ರಷ್ಟನಾಗುವುದು-ಭೂಮಿ ಒಳಗೊಳ್ಳುವುದು-ಇವೇ ಆ ಆಶಯಗಳು. ಈ ಮೂಲ ಆಶಯಗಳೆಲ್ಲ ಪ್ರಪಂಚಾದ್ಯಂತ ಒಂದಲ್ಲ ಒಂದು ರೀತಿಯಲ್ಲಿ ವಿತರಣೆಗೊಂಡಿವೆ. ಈಡಿಪಸ್‍ನನ್ನು ಭೂಮಿ ಒಳಗೊಂಡಿದ್ದರ ಜೊತೆಯಲ್ಲಿ ಸೀತೆಯನ್ನು ಭೂಮಿ ಬಾಯಿ ಬಿಟ್ಟು ಸೇರಿಸಿಕೊಂಡುದನ್ನು ಹೋಲಿಸಬಹುದು. ಇಲ್ಲಿನ ಕಥನ ಆಶಯಗಳಲ್ಲಿ ಮನಸೆಳೆವ ಮತ್ತೊಂದೆಂದರೆ ಸ್ಫಿಂಕ್ಸ್ ರಕ್ಕಸಿಯ ಒಗಟು. ಈಡಿಪಸ್ ಕಥೆಯ ಈ ಸ್ಫಿಂಕ್ಸ್ ಘಟನೆ ಮಾರ್ಷನ್ ಮತ್ತು ರಾಕ್ಷಸ ಸಂಬಂಧದ ಕಥನವರ್ಗಕ್ಕೆ ಸೇರುತ್ತದೆಂದು ವಿದ್ವಾಂಸರ ಅಭಿಪ್ರಾಯ. ಸ್ಫಿಂಕ್ಸ್ ರಾಕ್ಷಸಿಯ ಒಗಟು ಜನತ್ತಿನ ಪ್ರಾಚೀನ ರೂಪದ ಒಗಟುಗಳಲ್ಲಿ ಒಂದಾಗಿದೆ. ಇದು ಸ್ಪರ್ಧಾ ಒಗಟಿಗೂ ನಿದರ್ಶನವಾಗುತ್ತವೆ. ಸ್ಫಿಂಕ್ಸ್ ಕಥೆಗೆ ಸಮಾನವಾದ ಒಗಟು ಕಥೆಗಳು ಎಲ್ಲ ಕಡೆಯಲ್ಲೂ ದೊರೆಯುತ್ತವೆ. ಭಾರತದ ವರರುಚಿ ಮತ್ತು ರಾಕ್ಷಸ, ಯಕ್ಷಪ್ರಶ್ನೆ, ಬೇತಾಳಪಂಚವಿಂಶತಿ ಮೊದಲಾದುವನ್ನು ನಿದರ್ಶನಗಳಾಗಿ ಕೊಡಬಹುದು. ಹೀಗೆ ಒಂದಕ್ಕಿಂತ ಹೆಚ್ಚು ಆಶಯಗಳು ಇದರಲ್ಲಿರುವುರಿಂದ, ರಚನೆಯ ದೃಷ್ಟಿಯಿಂದ ಇದನ್ನು ಸಂಕೀರ್ಣ ಕಥಾವರ್ಗಕ್ಕೆ ಸೇರಿಸಬಹುದಾಗಿದೆ.

ಒಟ್ಟಿನಲ್ಲಿ ಈಡಿಪಸ್ ಕಥೆ ಜಗತ್ತಿನ ಹೆಚ್ಚು ಪ್ರಸಾರವುಳ್ಳ ಕಥೆಗಳಲ್ಲಿ ಒಂದಾಗಿದೆ. ಇದು ಜನಪದ ಕಥೆಯ ಆಶಯಗಳಿಂದ ರೂಪಗೊಂಡಿದ್ದು. ಥೀಬ್ಸಿನ ಪ್ರಧಾನರನ್ನು ಇದು ಆಕರ್ಷಿಸಿರಬಹುದು ಅಥವಾ ಜನಪದ ಕಥನ ಸಮುದಾಯವನ್ನು ಸ್ವೀಕರಿಸಿ ಗ್ರೀಕರು ಮಿಥ್ಯೇತಿಹಾಸವೊಂದನ್ನು ಸೃಷ್ಟಿಸಿಕೊಂಡಿರಬಹುದು. ಅಂತೂ ಇದರಲ್ಲಿ ಚರಿತ್ರೆಯ ಅಂಶಗಳು ಎಷ್ಟಿವೆಯೊ ಅಥವಾ ಏನೂ ಇಲ್ಲವೊ ಗೊತ್ತಿಲ್ಲ. ವಾಕ್ ಸಂಪ್ರದಾಯದಲ್ಲಿ ಹರಿದು ಪೂರ್ಣ ಜಾನಪದ ಎನ್ನಿಸುವಷ್ಟರಮಟ್ಟಿಗೆ ಇದು ರೂಪಾಂತರಗೊಂಡಿದೆ ಎಂಬುದಂತೂ ಸತ್ಯವಾದ ಮಾತು.

"https://kn.wikipedia.org/w/index.php?title=ಈಡಿಪಸ್&oldid=1053495" ಇಂದ ಪಡೆಯಲ್ಪಟ್ಟಿದೆ