ಬೆಲೆ
ಸಾಮಾನ್ಯ ಬಳಕೆಯಲ್ಲಿ, ಬೆಲೆಯು ಒಂದು ಪಕ್ಷದಿಂದ ಮತ್ತೊಂದಕ್ಕೆ ಸರಕುಗಳು ಅಥವಾ ಸೇವೆಗಳ ಪ್ರತಿಯಾಗಿ ನೀಡಲಾದ ಸಂದಾಯ ಅಥವಾ ಪರಿಹಾರದ ಪ್ರಮಾಣ.[೧]
ಆಧುನಿಕ ಅರ್ಥವ್ಯವಸ್ಥೆಗಳಲ್ಲಿ, ಬೆಲೆಗಳನ್ನು ಸಾಮಾನ್ಯವಾಗಿ ಚಲಾವಣೆಯ ಯಾವುದೋ ರೂಪದ ಏಕಮಾನಗಳಲ್ಲಿ ವ್ಯಕ್ತಪಡಿಸಲಾಗುತ್ತದೆ. (ಸರಕುಗಳಿಗೆ, ಅವನ್ನು ಸರಕಿನ ಏಕಮಾನ ತೂಕಕ್ಕೆ ಚಲಾವಣೆಯಾಗಿ ವ್ಯಕ್ತಪಡಿಸಲಾಗುತ್ತದೆ, ಉದಾ. ಕೆ.ಜಿ. ಇಷ್ಟು ರೂಪಾಯಿಗಳು.) ಬೆಲೆಗಳನ್ನು ಇತರ ಸರಕುಗಳು ಅಥವಾ ಸೇವೆಗಳ ಪ್ರಮಾಣಗಳಾಗಿ ಹೇಳಬಹುದಾದರೂ, ಈ ರೀತಿಯ ವಸ್ತು ವಿನಿಮಯವನ್ನು ಅಪರೂಪವಾಗಿ ಕಾಣಲಾಗುತ್ತದೆ. ಬೆಲೆಗಳನ್ನು ಕೆಲವೊಮ್ಮೆ ವ್ಯಾಪಾರ ಚೀಟಿಗಳು ಮತ್ತು ವಾಯು ಮೈಲಿಗಳಂತಹ ವೋಚರ್‍ಗಳ ರೂಪದಲ್ಲಿ ಹೇಳಲಾಗುತ್ತದೆ. ಕೆಲವು ಸಂದರ್ಭಗಳಲ್ಲಿ, ಸಿಗರೇಟುಗಳನ್ನು ಚಲಾವಣೆಯಾಗಿ ಬಳಸಲಾಗಿದೆ, ಉದಾಹರಣೆಗೆ ಅತಿ ಹಣದುಬ್ಬರದ ಸಮಯಗಳಲ್ಲಿ ಕಾರಾಗೃಹಗಳಲ್ಲಿ, ಮತ್ತು ಎರಡನೇ ವಿಶ್ವಯುದ್ಧದ ಅವದಿಯಲ್ಲಿ ಕೆಲವು ಸ್ಥಳಗಳಲ್ಲಿ. ಕಳ್ಳಪೇಟೆ ಅರ್ಥವ್ಯವಸ್ಥೆಯಲ್ಲಿ, ವಸ್ತು ವಿನಿಮಯವೂ ತುಲನಾತ್ಮಕವಾಗಿ ಸಾಮಾನ್ಯವಾಗಿದೆ.
ಅನೇಕ ಹಣಕಾಸಿನ ವಹಿವಾಟುಗಳಲ್ಲಿ, ಬೆಲೆಗಳನ್ನು ಇತರ ರೀತಿಗಳಲ್ಲಿ ಹೇಳುವುದು ವಾಡಿಕೆಯಾಗಿದೆ. ಅತ್ಯಂತ ಸ್ಪಷ್ಟ ಉದಾಹರಣೆ ಒಂದು ಸಾಲದ ಬೆಲೆ ನಿಗದಿಯಲ್ಲಿದೆ, ಇದರಲ್ಲಿ ವೆಚ್ಚವನ್ನು ಶೇಕಡ ಬಡ್ಡಿ ದರವಾಗಿ ವ್ಯಕ್ತಪಡಿಸಲಾಗುತ್ತದೆ. ಪಾವತಿಸಬೇಕಾದ ಬಡ್ಡಿಯ ಒಟ್ಟು ಮೊತ್ತವು ಸಾಲದ ಅಪಾಯ, ಸಾಲದ ಮೊತ್ತ ಮತ್ತು ಸಾಲದ ಅವಧಿಯನ್ನು ಅವಲಂಬಿಸಿದೆ. ಹಣಕಾಸು ಉತ್ಪನ್ನಗಳು ಮತ್ತು ಇತರ ಹಣಕಾಸು ಸೊತ್ತುಗಳ ಬೆಲೆ ನಿಗದಿಯಲ್ಲಿ ಇತರ ಉದಾಹರಣೆಗಳನ್ನು ಕಾಣಬಹುದಾಗಿದೆ. ಉದಾಹರಣೆಗೆ ಹಲವಾರು ದೇಶಗಳಲ್ಲಿ ಹಣದುಬ್ಬರ ಸಂಬಂಧಿತ ಸರ್ಕಾರಿ ಬಂಡವಾಳ ಪತ್ರಗಳ ಬೆಲೆಯನ್ನು ವಾಸ್ತವ ಬೆಲೆಯನ್ನು ಬಂಡವಾಳ ಪತ್ರವನ್ನು ಹೊರಡಿಸಿದಾಗಿನಿಂದ ಇರುವ ಹಣದುಬ್ಬರವನ್ನು ಪ್ರತಿನಿಧಿಸುವ ಒಂದು ಅಪವರ್ತನದಿಂದ ಭಾಗಿಸಿದಾಗ ಬರುವ ಪರಿಣಾಮವಾಗಿ ಹೇಳಲಾಗುತ್ತದೆ.
ಕೆಲವೊಮ್ಮೆ ಬೆಲೆಯು ಅಂತಿಮ ಸಂದಾಯ ಮೊತ್ತದ ಬದಲಾಗಿ, ಸರಕುಗಳು ಮತ್ತು ಸೇವೆಗಳ ಮಾರಾಟಗಾರನು ವಿನಂತಿಸಿದ ಸಂದಾಯದ ಪ್ರಮಾಣವನ್ನು ಸೂಚಿಸುತ್ತದೆ. ಈ ವಿನಂತಿಸಲಾದ ಮೊತ್ತವನ್ನು ಹಲವುವೇಳೆ ಕೇಳುವ ಬೆಲೆ ಅಥವಾ ಮಾರಾಟ ಬೆಲೆ ಎಂದು ಕರೆಯಲಾಗುತ್ತದೆ. ವಾಸ್ತವಿಕ ಪಾವತಿಯನ್ನು ವಹಿವಾಟು ಬೆಲೆ ಅಥವಾ ವ್ಯಾಪಾರದ ಬೆಲೆ ಎಂದು ಕರೆಯಬಹುದು. ಹಾಗೆಯೇ, ಕೂಗಿದ ಬೆಲೆ ಅಥವಾ ಖರೀದಿ ಬೆಲೆಯು ಸರಕುಗಳು ಮತ್ತು ಸೇವೆಗಳ ಖರೀದಿದಾರನ್ನು ಕೊಡಲು ವ್ಯಕ್ತಪಡಿಸಿದ ಸಂದಾಯದ ಪ್ರಮಾಣ.
ಉಲ್ಲೇಖಗಳು
[ಬದಲಾಯಿಸಿ]- ↑ Schindler, Robert M. (2012). Pricing Strategies: A Marketing Approach. Thousand Oaks, California: SAGE. pp. 1–3. ISBN 978-1-4129-6474-6.