ವಿಷಯಕ್ಕೆ ಹೋಗು

ಕ್ಲೈಡ್ ವಿಲಿಯಮ್ ಟಾಂಬೋ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ತಾನೇ ತಯಾರಿಸಿದ ಟೆಲಿಸ್ಕೋಪ್ ಜತೆಗೆ

ಕ್ಲೈಡ್ ವಿಲಿಯಮ್ ಟಾಂಬೋ (1906 –1997) -ಅಮೆರಿಕ ದೇಶದ ಖಗೋಳವಿಜ್ಞಾನಿ. ಪ್ಲೂಟೊಗ್ರಹದ ಆವಿಷ್ಕರ್ತೃ (1930). ( ಆದರೆ ಈ ಪ್ಲೂಟೋ ಅನ್ನು ಗ್ರಹದ ಬದಲಾಗಿ ಕ್ಷುದ್ರಗ್ರಹವೆಂದು ೨೦೦೬ ರಲ್ಲಿ ವರ್ಗೀಕರಿಸಲಾಯಿತು)

ಬದುಕು ಮತ್ತು ಸಾಧನೆ

[ಬದಲಾಯಿಸಿ]

ಕನ್ಸಾಸ್ ವಿಶ್ವವಿದ್ಯಾಲಯದಿಂದ ಪದವೀಧರನಾಗಿ ತನ್ನ ಬಾಲ್ಯದ ಹವ್ಯಾಸವಾದ ಖಗೋಳ ವೀಕ್ಷಣೆಯನ್ನು ವೃತ್ತಿಯನ್ನಾಗಿ ಆಯ್ದುಕೊಂಡ. ಸ್ವತಃ ಮೂರು ಪ್ರತಿಫಲನ ದೂರದರ್ಶಕಗಳನ್ನು ಈತ ತನ್ನ ವಿದ್ಯಾರ್ಥಿದೆಸೆಯಲ್ಲಿ ರಚಿಸಿದ್ದ. ಸ್ವಂತ ವೀಕ್ಷಣೆಗಳನ್ನು ಆಧರಿಸಿ ಬಿಡಿಸಿದ ಗ್ರಹಗಳ ಚಿತ್ರಣವನ್ನು ಅರಿಝೋನದಲ್ಲಿರುವ ಲೋವೆಲ್ ವೀಕ್ಷಣಾಲಯಕ್ಕೆ ಕಳಿಸಿದ (1929). ಇದರ ಆಧಾರದ ಮೇಲೆ ಈತನಿಗೆ ಅಲ್ಲಿ ಉದ್ಯೋಗ ದೊರೆಯಿತು. ಮುಂದೆ 1946 ರಲ್ಲಿ ಎಬರ್ಡೀನ್ ಬ್ಯಾಲಿಸ್ಟಿಕ್ ಲ್ಯಾಬೊರೆಟರಿಯಲ್ಲಿ ಟಾಂಬ ಖಗೋಳವಿಜ್ಞಾನಿಯಾಗಿ ನೇಮಕ ಪಡೆದ. ಅಲ್ಲದೆ 1955ರಿಂದಲೇ ಈತ ನ್ಯೂ ಮೆಕ್ಸಿಕೊ ಸ್ಟೇಟ್ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕ ವೃತ್ತಿಯಲ್ಲಿ ತೊಡಗಿದ. ಟಾಂಬೋ ಪ್ರಸಿದ್ಧನಾಗಿರುವುದು. ಈ ಹಿಂದೆ ಹೇಳಿದಂತೆ, ಪ್ಲೊಟೊ ಗ್ರಹದ ಆವಿಷ್ಕರ್ತೃ ಎಂದು. ಪರ್‍ಸಿವೆಲ್ ಲೋವೆಲ್ (1855-1916) ಎಂಬಾತ ಯುರೇನಸ್ ಗ್ರಹದ ಚಲನೆಯು ನೆಪ್ಚೂನ್ ಆಚೆಗಿನ ಗ್ರಹವೊಂದರ ಬಗ್ಗೆ ಪುರಾವೆಗಳನ್ನು ನೀಡುತ್ತದೆ ಎಂದು ಮನಗಂಡು, ಅದರ ಶೋಧನೆಗಾಗಿ ವ್ಯವಸ್ಥಿತ ಶೋಧನ ಕ್ರಮವನ್ನು ನಿರೂಪಿಸಿದ. ಈ ಪ್ರಯೋಗಗಳಲ್ಲಿ ಪಾಲುದಾರರನಾಗಿದ್ದ ಟಾಂಬೋ 1930ರ ಜನವರಿ 23 ಮತ್ತು 29ರಂದು ತೆಗೆದ ಛಾಯಚಿತ್ರಗಳೆರಡನ್ನು ಹೋಲಿಸಿ ಮುಂದಿನ ಫೆಬ್ರುವರಿ 18ರಂದು ಪ್ಲೂಟೋ ಗ್ರಹದ ಇರವನ್ನು ಘೋಷಿಸಿದ. ಹಲವು ನಕ್ಷತ್ರ ಪುಂಜಗಳನ್ನೂ ಚಂಚಲ ನಕ್ಷತ್ರಗಳನ್ನೂ ಕ್ಷುದ್ರಗ್ರಹ ಮತ್ತು ನೀಹಾರಿಕೆಗಳನ್ನೂ ಟಾಂಬೋ ಶೋಧಿಸಿದ್ದಾನೆ. ಅಲ್ಲದೆ ಭೂ ಉಪಗ್ರಹಗಳ ಮತ್ತು ರಾಕೆಟ್ ಕ್ಷಿಪಣಿಗಳ ವಿಚಾರವಾಗಿ ಕೂಡ ಈತ ಸಂಶೋಧನೆ ನಡೆಸಿದ್ದಾನೆ. ಲಂಡನ್‍ನ ರಾಯಲ್ ಅಸ್ಟ್ರನಾಮಿಕಲ್ ಸೊಸೈಟಿ ಜೇಕ್‍ಸನ್ - ಗ್ವಿಲೆಟ್ ಬಹುಮಾನ ಮತ್ತು ಕಂಚಿನ ಪದಕಗಳನ್ನಿತ್ತು ಟೋಂಬವನ್ನು ಗೌರವಿಸಿದೆ.