ಅಬೂ ಬಕರ್
ಅಬೂ ಬಕರ್ أبو بكر | |
---|---|
ಸಿದ್ದೀಕ್ (ಸತ್ಯವಂತ)
| |
ಅರಬ್ಬೀ ಭಾಷೆಯಲ್ಲಿರುವ ಅಬೂ ಬಕರ್‌ರ ಹೆಸರು | |
ಪ್ರಥಮ ಖಲೀಫ | |
ಖಲೀಫಗಿರಿ | ಜೂನ್ 8, 632 ರಿಂದ ಆಗಸ್ಟ್ 23, 634 |
ಉತ್ತರಾಧಿಕಾರಿ | ಉಮರ್ ಬಿನ್ ಖತ್ತಾಬ್ |
ಪತ್ನಿಯರು |
|
ಗೋತ್ರ | ಬನೂ ತೈಮ್ |
ತಂದೆ | ಅಬೂ ಕುಹಾಫ ಉಸ್ಮಾನ್ ಬಿನ್ ಆಮಿರ್ |
ತಾಯಿ | ಉಮ್ಮುಲ್ ಖೈರ್ ಸಲ್ಮಾ ಬಿಂತ್ ಸಖ್ರ್ |
ಜನನ | ಮಕ್ಕಾ, ಅರೇಬಿಯನ್ ಪರ್ಯಾಯ ದ್ವೀಪ ಈಗಿನ ಸೌದಿ ಅರೇಬಿಯಾ | ೨೭ ಅಕ್ಟೋಬರ್ ೫೭೩
ಮರಣ | 23 August 634 ಮದೀನಾ, ಅರೇಬಿಯನ್ ಪರ್ಯಾಯ ದ್ವೀಪ ಈಗಿನ ಸೌದಿ ಅರೇಬಿಯಾ | (aged 60)
Burial | ಮದೀನಾ, ಅರೇಬಿಯನ್ ಪರ್ಯಾಯ ದ್ವೀಪ ಈಗಿನ ಸೌದಿ ಅರೇಬಿಯಾ |
ಕೆಲಸ | ವ್ಯಾಪಾರಿ, ಆಡಳಿತಗಾರ |
ಧರ್ಮ | ಇಸ್ಲಾಂ ಧರ್ಮ |
ಅಬೂ ಬಕರ್ ಅಬ್ದುಲ್ಲಾ ಬಿನ್ ಅಬೂ ಕುಹಾಫ (ಅರಬ್ಬಿ: أبو بكر عبد الله بن أبي قحافة (27 ಅಕ್ಟೋಬರ್ 573 – 23 ಆಗಸ್ಟ್ 634)) — ಮುಹಮ್ಮದ್‌ರ ಆಪ್ತಮಿತ್ರ ಮತ್ತು ಪ್ರಮುಖ ಅನುಯಾಯಿಗಳಲ್ಲೊಬ್ಬರು. ಇಸ್ಲಾಮೀ ಸಾಮ್ರಾಜ್ಯದ ಪ್ರಥಮ ಖಲೀಫ. ಮುಸಲ್ಮಾನರ ನಂಬಿಕೆ ಪ್ರಕಾರ ಬದುಕಿರುವಾಗಲೇ ಸ್ವರ್ಗದ ಸುವಾರ್ತೆ ಪಡೆದ ಹತ್ತು ಸಹಾಬಿಗಳಲ್ಲಿ ಒಬ್ಬರು. ಮುಹಮ್ಮದ್‌ರ ಪತ್ನಿ ಆಯಿಶರ ತಂದೆ.
ಅಬೂ ಬಕರ್ ಕ್ರಿ.ಶ. 573ರಲ್ಲಿ ಅಬೂ ಕುಹಾಫ ಉಸ್ಮಾನ್ ಬಿನ್ ಆಮಿರ್ ಮತ್ತು ಉಮ್ಮುಲ್ ಖೈರ್ ಸಲ್ಮಾ ಬಿಂತ್ ಸಖ್ರ್ ದಂಪತಿಯ ಮಗನಾಗಿ ಜನಿಸಿದರು. ಅವರು ಕುರೈಷ್ ಬುಡಕಟ್ಟಿನ ಬನೂ ತೈಮ್ ಗೋತ್ರಕ್ಕೆ ಸೇರಿದವರು. ಇಸ್ಲಾಮೀ ಪೂರ್ವ ಕಾಲದಲ್ಲೇ ಅವರು ಏಕದೇವತಾವಾದಿಯಾಗಿದ್ದರು ಮತ್ತು ಮುಹಮ್ಮದ್‌ರ ಆಪ್ತಮಿತ್ರನಾಗಿದ್ದರು. ಕ್ರಿ.ಶ. 610 ರಲ್ಲಿ ಇಸ್ಲಾಂ ಧರ್ಮವನ್ನು ಸ್ವೀಕರಿಸಿದ ಬಳಿಕ ಅವರು ಮುಹಮ್ಮದ್‌ರಿಗೆ ಇನ್ನಷ್ಟು ಆಪ್ತರಾಗಿ ಅವರ ಮರಣಾನಂತರ ಅವರ ಉತ್ತರಾಧಿಕಾರಿಯಾಗಿ ಇಸ್ಲಾಮೀ ಸಾಮ್ರಾಜ್ಯದ ಖಲೀಫ ಆದರು. ಮುಹಮ್ಮದ್ ಮತ್ತು ಇಸ್ಲಾಂ ಧರ್ಮದ ಮೇಲಿನ ನಿಷ್ಠೆಯಿಂದಾಗಿ ಅವರಿಗೆ ಸಿದ್ದೀಕ್ (ಸತ್ಯವಂತ) ಎಂಬ ಬಿರುದು ದೊರಕಿತ್ತು. ಮಕ್ಕಾದ ಶ್ರೀಮಂತರಲ್ಲಿ ಒಬ್ಬರಾಗಿದ್ದ ಅಬೂ ಬಕರ್ ತಮ್ಮ ಸಂಪತ್ತನ್ನು ಇಸ್ಲಾಂ ಧರ್ಮಕ್ಕಾಗಿ ವ್ಯಯಿಸಿದರು. ಮಕ್ಕಾದಲ್ಲೂ ಮದೀನಾದಲ್ಲೂ ಮುಹಮ್ಮದ್‌ರ ನೆರಳಾಗಿ ಬದುಕಿದರು.
ಕ್ರಿ.ಶ. 632 ರಲ್ಲಿ ಮುಹಮ್ಮದ್ ನಿಧನರಾದಾಗ, ಅಬೂ ಬಕರ್ ಇಸ್ಲಾಮೀ ಸಾಮ್ರಾಜ್ಯದ ಖಲೀಫ ಮತ್ತು ಮುಸ್ಲಿಮ್ ಸಮುದಾಯದ ಮುಖಂಡರಾಗಿ ಆಯ್ಕೆಯಾದರು. ಅವರ ಆಡಳಿತದಲ್ಲಿ ಇಸ್ಲಾಮೀ ಸಾಮ್ರಾಜ್ಯವು ಅರೇಬಿಯನ್ ಪರ್ಯಾಯ ದ್ವೀಪದಾದ್ಯಂತ ವಿಸ್ತರಿಸಿತು. ಅವರು ಬೈಝಾಂಟೈನ್ ಮತ್ತು ಸಾಸಾನಿ ಸಾಮ್ರಾಜ್ಯಗಳ ವಿರುದ್ಧ ಹೋರಾಡಿದರು.
ಕ್ರಿ.ಶ. 634 ರಲ್ಲಿ ಅಬೂ ಬಕರ್ ನಿಧನರಾದರು. ಅವರನ್ನು ಮದೀನದಲ್ಲಿ ಮುಹಮ್ಮದ್‌ರ ಸಮಾಧಿಯ ಸಮೀಪ ಸಮಾಧಿ ಮಾಡಲಾಯಿತು. ಅವರು ಎರಡು ವರ್ಷ ಎರಡು ತಿಂಗಳು ಆಡಳಿತ ನಡೆಸಿದ್ದರು. ಅವರ ನಂತರ ಉಮರ್ ಬಿನ್ ಖತ್ತಾಬ್ ಖಲೀಫರಾದರು.
ವಂಶಾವಳಿ
[ಬದಲಾಯಿಸಿ]ಅಬೂ ಬಕರ್ ಬಿನ್ ಅಬೂ ಕುಹಾಫ ಉಸ್ಮಾನ್ ಬಿನ್ ಆಮಿರ್ ಬಿನ್ ಅಮ್ರ್ ಬಿನ್ ಕಅಬ್ ಬಿನ್ ಸಅದ್ ಬಿನ್ ತೈಮ್ ಬಿನ್ ಮುರ್‍ರ ಬಿನ್ ಕಅಬ್ ಬಿನ್ ಲುಅಯ್ ಬಿನ್ ಗಾಲಿಬ್ ಬಿನ್ ಫಿಹ್ರ್ ಬಿನ್ ಮಾಲಿಕ್ ಬಿನ್ ನದ್ರ್ (ಕುರೈಷ್) ಬಿನ್ ಕಿನಾನ ಬಿನ್ ಖುಝೈಮ ಬಿನ್ ಮುದ್ರಿಕ ಬಿನ್ ಇಲ್ಯಾಸ್ ಬಿನ್ ಮುದರ್ ಬಿನ್ ನಿಝಾರ್ ಬಿನ್ ಮಅದ್ದ್ ಬಿನ್ ಅದ್ನಾನ್.
ಜನನ ಮತ್ತು ಬೆಳವಣಿಗೆ
[ಬದಲಾಯಿಸಿ]ಅಬೂಬಕರ್ ಕ್ರಿ.ಶ. 573 ರಲ್ಲಿ ಮಕ್ಕಾದಲ್ಲಿ ಜನಿಸಿದರು. ಅವರು ಮಕ್ಕಾದಲ್ಲಿಯೇ ಬೆಳೆದು ದೊಡ್ಡವರಾದರು. ಇಸ್ಲಾಮೀ ಪೂರ್ವ ಕಾಲದಲ್ಲಿ ಅವರು ಕುರೈಷರ ಮುಖಂಡರಲ್ಲೊಬ್ಬರಾಗಿದ್ದು ಜನಾನುರಾಗಿಯಾಗಿದ್ದರು. ಅತ್ಯಂತ ಸೌಮ್ಯ ಸ್ವಭಾವದ ವ್ಯಕ್ತಿ ಮತ್ತು ಮಕ್ಕಾದ ಶ್ರೀಮಂತರಲ್ಲಿ ಒಬ್ಬರಾಗಿದ್ದ ಅಬೂಬಕರ್ ಮುಹಮ್ಮದ್‌ರ ಆತ್ಮೀಯ ಮಿತ್ರರಾಗಿದ್ದರು.
ಅಬೂ ಬಕರ್‌ರ ನಿಜವಾದ ಹೆಸರು ಅಬ್ದುಲ್ಲಾ. ಅವರ ತಂದೆ ಅಬೂ ಕುಹಾಫ ಮಕ್ಕಾ ವಿಜಯದ ತನಕ ಇಸ್ಲಾಂ ಧರ್ಮ ಸ್ವೀಕರಿಸಿರಲಿಲ್ಲ. ಅಬೂ ಬಕರ್‌ರ ಮರಣಾನಂತರವೂ ಅವರ ತಂದೆ ಜೀವಂತವಾಗಿದ್ದರು. ಅವರ ತಾಯಿ ಉಮ್ಮುಲ್ ಖೈರ್ ಮದೀನಕ್ಕೆ ಹಿಜ್ರ (ವಲಸೆ) ಮಾಡುವುದಕ್ಕೆ ಮೊದಲೇ ಇಸ್ಲಾಂಗೆ ಮತಾಂತರವಾಗಿದ್ದರು.
ಅಬೂ ಬಕರ್ ವರ್ತಕರಾಗಿದ್ದು ವ್ಯಾಪಾರ ನಿಮಿತ್ತ ವಿವಿಧ ದೇಶಗಳಿಗೆ ತೆರಳುತ್ತಿದ್ದರು. ಅವರು ಬಡವರು ಮತ್ತು ನಿರ್ಗತಿಕರಿಗೆ ಉದಾರವಾಗಿ ಧನ ಸಹಾಯ ಮಾಡುತ್ತಿದ್ದರು. ಒಮ್ಮೆ ಅವರು ವ್ಯಾಪಾರ ನಿಮಿತ್ತ ಸಿರಿಯಾಗೆ ತೆರಳಿದಾಗ ದಾರಿ ಮಧ್ಯೆ ಬಹೀರಾ ಸನ್ಯಾಸಿಯನ್ನು ಭೇಟಿಯಾದರೆಂದು ನಂಬಲಾಗುತ್ತದೆ. ಸನ್ಯಾಸಿ ಅವರೊಡನೆ ನಿಮ್ಮ ಊರಿನಲ್ಲಿ ಮತ್ತು ನಿಮ್ಮ ಬುಡಕಟ್ಟಿನಲ್ಲಿ ಒಬ್ಬ ಪ್ರವಾದಿ ಬರಲಿದ್ದಾರೆ ಎಂದು ಹೇಳಿದರು. ಈ ಕಾರಣದಿಂದಲೇ ಮುಹಮ್ಮದ್ ಪ್ರವಾದಿಯಾದಾಗ ಅಬೂ ಬಕರ್ ಮೊತ್ತಮೊದಲು ಅವರಲ್ಲಿ ನಂಬಿಕೆಯಿಟ್ಟರು ಎಂದು ಹೇಳಲಾಗುತ್ತದೆ.
ಅಬೂ ಬಕರ್ ಇಸ್ಲಾಮೀ ಪೂರ್ವ ಕಾಲದಲ್ಲೂ ಶರಾಬು ಕುಡಿಯುತ್ತಿರಲಿಲ್ಲ ಮತ್ತು ವಿಗ್ರಹಪೂಜೆ ಮಾಡುತ್ತಿರಲಿಲ್ಲ ಎಂದು ಹೇಳಲಾಗುತ್ತದೆ. ಅವರು ಅತ್ಯಂತ ಮೃದು ಸ್ವಭಾವದ ಸೌಮ್ಯ ವ್ಯಕ್ತಿಯಾಗಿದ್ದರು. ಯಾರಿಗೂ ನೋವು ಕೊಡುವುದು ಅವರ ಜಾಯಮಾನವಾಗಿರಲಿಲ್ಲ. ಅವರು ಹೇಳುತ್ತಿದ್ದರು: "ನಾನು ಇಸ್ಲಾಮೀ ಪೂರ್ವ ಕಾಲದಲ್ಲೂ ಇಸ್ಲಾಂ ಧರ್ಮಕ್ಕೆ ಸೇರಿದ ನಂತರವೂ ಶರಾಬು ಕುಡಿದಿಲ್ಲ. ಏಕೆಂದರೆ ನಾನು ನನ್ನ ಗೌರವವನ್ನು ಮತ್ತು ಸ್ವಭಾವವನ್ನು ಕಾಪಾಡುತ್ತಿದ್ದೆ. ಶರಾಬು ಕುಡಿಯುವವನು ತನ್ನ ಗೌರವ ಮತ್ತು ಸ್ವಭಾವವನ್ನು ಹಾಳು ಮಾಡುತ್ತಾನೆ."
ಅಬೂಬಕರ್ ವಂಶಶಾಸ್ತ್ರದಲ್ಲಿ ಪರಿಣತರಾಗಿದ್ದರು. ಅವರು ಖ್ಯಾತ ಅರಬ್ಬಿ ವಂಶತಜ್ಞರಾದ ಉಕೈಲ್ ಬಿನ್ ಅಬೂ ತಾಲಿಬ್ ಮತ್ತು ಜುಬೈರ್ ಬಿನ್ ಮುತ್‌ಇಮ್ ಮುಂತಾದವರ ಗುರುಗಳಾಗಿದ್ದರು. ಒಮ್ಮೆ ಮುಹಮ್ಮದ್ ಅವರ ಬಗ್ಗೆ “ಕುರೈಷ್ ವಂಶದ ಬಗ್ಗೆ ಅತಿಹೆಚ್ಚು ಜ್ಞಾನವುಳ್ಳವರು” ಎಂದು ಹೇಳಿದ್ದರು. ಅರೇಬಿಯನ್ ಪರ್ಯಾಯ ದ್ವೀಪದ ಎಲ್ಲಾ ವಂಶಗಳ ಬಗ್ಗೆಯೂ ಅವರಿಗೆ ಜ್ಞಾನವಿತ್ತು.
ಇಸ್ಲಾಮ್ ಸ್ವೀಕಾರ
[ಬದಲಾಯಿಸಿ]ಅಬೂ ಬಕರ್ ಸತ್ಯಧರ್ಮದ ಹುಡುಕಾಟದಲ್ಲಿದ್ದರು. ಅವರು ವ್ಯಾಪಾರ ನಿಮಿತ್ತ ಸಂಪೂರ್ಣ ಅರೇಬಿಯನ್ ಪರ್ಯಾಯ ದ್ವೀಪವನ್ನು ಸುತ್ತುತ್ತಿದ್ದರು. ಪ್ರಯಾಣದ ಮಧ್ಯೆ ಅನೇಕ ಧಾರ್ಮಿಕ ಸಂತರನ್ನು ಮತ್ತು ಕ್ರೈಸ್ತ ಪಾದ್ರಿಗಳನ್ನು ಭೇಟಿಯಾಗುತ್ತಿದ್ದರು. ಒಂದಿನ ಅವರು ಕಅಬಾಲಯದಲ್ಲಿ ಝೈದ್ ಬಿನ್ ಅಮ್ರ್ ಬಿನ್ ನುಫೈಲ್‌ರ ಬಳಿ ಕುಳಿತಿದ್ದರು. ಆಗ ಅಲ್ಲಿಂದ ಹಾದುಹೋಗುತ್ತಿದ್ದ ಉಮಯ್ಯ ಬಿನ್ ಅಬೂ ಸಲ್ತ್ ಝೈದ್‌ರೊಂದಿಗೆ, “ಸತ್ಯಾನ್ವೇಷಕನೇ, ಹೇಗಿದ್ದೀಯಾ?” ಎಂದು ಕೇಳಿದರು. ಅವರು ಕ್ಷೇಮವೆಂದು ಉತ್ತರಿಸಿದಾಗ, ಉಮಯ್ಯ ಕೇಳಿದರು: “ನಿನಗೆ ಅವರು (ನಿರೀಕ್ಷಿತ ಪ್ರವಾದಿ) ಸಿಕ್ಕಿದರೇ?” ಅವರು ಇಲ್ಲವೆಂದರು.
ಆ ತನಕ ಮಕ್ಕಾದ ಜನರು ಒಬ್ಬ ಪ್ರವಾದಿಯನ್ನು ನಿರೀಕ್ಷಿಸುತ್ತಿದ್ದರೆಂಬ ವಿಷಯ ಅಬೂ ಬಕರ್‌ಗೆ ತಿಳಿದಿರಲಿಲ್ಲ. ಅವರು ನೇರವಾಗಿ ವರಕ ಬಿನ್ ನೌಫಲ್‌ರ ಬಳಿಗೆ ಹೋಗಿ ವಿಚಾರಿಸಿದಾಗ, “ಹೌದು, ನಿಮ್ಮ ಜನರಲ್ಲಿ ಒಬ್ಬ ಪ್ರವಾದಿ ಬರಲಿದ್ದಾರೆ” ಎಂದು ಅವರು ಉತ್ತರಿಸಿದರು. ಈ ಕಾರಣದಿಂದಲೇ ಮುಹಮ್ಮದ್ ಪ್ರವಾದಿಯಾದಾಗ ಅವರಲ್ಲಿ ನಂಬಿಕೆಯಿಡಲು ಅಬೂ ಬಕರ್ ಸ್ವಲ್ಪವೂ ಹಿಂಜರಿಯಲಿಲ್ಲ ಎನ್ನಲಾಗುತ್ತದೆ.
ಧರ್ಮಪ್ರಚಾರ
[ಬದಲಾಯಿಸಿ]ಇಸ್ಲಾಮ್ ಧರ್ಮಕ್ಕೆ ಮತಾಂತರವಾದ ನಂತರ ಅಬೂ ಬಕರ್ ಜನರನ್ನು ಇಸ್ಲಾಮಿನ ಕಡೆಗೆ ಆಮಂತ್ರಿಸಲು ಆರಂಭಿಸಿದರು. ಅವರ ಪ್ರಯತ್ನದ ಫಲವಾಗಿ ಅನೇಕ ಮಂದಿ ಇಸ್ಲಾಮ್ ಧರ್ಮ ಸ್ವೀಕರಿಸಿದರು. ಝುಬೈರ್ ಬಿನ್ ಅವ್ವಾಮ್, ಉಸ್ಮಾನ್ ಬಿನ್ ಅಫ್ಫಾನ್, ತಲ್ಹ ಬಿನ್ ಉಬೈದುಲ್ಲಾ, ಸಅದ್ ಬಿನ್ ಅಬೂ ವಕ್ಕಾಸ್, ಅಬ್ದುರ್‍ರಹ್ಮಾನ್ ಬಿನ್ ಔಫ್, ಉಸ್ಮಾನ್ ಬಿನ್ ಮಝ್‌ಊನ್, ಅಬೂ ಉಬೈದ ಬಿನ್ ಜರ್‍ರಾಹ್, ಅಬೂ ಸಲಮ ಬಿನ್ ಅಬ್ದುಲ್ ಅಸದ್, ಅರ್ಕಮ್ ಬಿನ್ ಅಬೂ ಅರ್ಕಮ್ ಮುಂತಾದವರು ಅವರಲ್ಲಿ ಪ್ರಮುಖರು. ಅಬೂ ಬಕರ್ ತಮ್ಮ ಕುಟುಂಬ ಸದಸ್ಯರನ್ನು ಇಸ್ಲಾಮಿಗೆ ಕರೆದಾಗ ಅವರ ಮಕ್ಕಳಾದ ಅಬ್ದುಲ್ಲಾ, ಅಸ್ಮಾ, ಆಯಿಶ, ಪತ್ನಿ ಉಮ್ಮು ರೂಮಾನ್ ಮತ್ತು ಸೇವಕ ಆಮಿರ್ ಬಿನ್ ಫುಹೈರ ಇಸ್ಲಾಮ್ ಸ್ವೀಕರಿಸಿದರು.
ಇತರ ಮುಸಲ್ಮಾನರಂತೆ ಅಬೂ ಬಕರ್ ಕೂಡ ಕುರೈಷರಿಂದ ತೀವ್ರ ಹಿಂಸೆಯನ್ನು ಅನುಭವಿಸಿದ್ದರು. ಒಮ್ಮೆ ಅವರು ಮುಹಮ್ಮದ್‌ರೊಂದಿಗೆ ಕಅಬಾಲಯದಲ್ಲಿ ಜನರನ್ನು ಬಹಿರಂಗವಾಗಿ ಇಸ್ಲಾಮಿಗೆ ಆಮಂತ್ರಿಸಿದರು. ಆಗ ಕುರೈಷರು ಅವರನ್ನು ಹಿಡಿದು ತೀವ್ರವಾಗಿ ಥಳಿಸಿದರು. ಕುರೈಷ್ ಮುಖಂಡ ಉತ್ಬ ಬಿನ್ ರಬೀಅ ಅವರ ಮುಖಕ್ಕೆ ಒಂದೇ ಸವನೆ ಚಪ್ಪಲಿಯಿಂದ ಬಾರಿಸತೊಡಗಿದ ಕಾರಣ, ಅವರ ಮೂಗು ಮತ್ತು ಮುಖವನ್ನು ಬೇರ್ಪಡಿಸಿ ತಿಳಿಯಲಾಗದಷ್ಟು ಅವರ ಮುಖ ಊದಿಕೊಂಡಿತು. ಅಷ್ಟರಲ್ಲಿ ಬನೂ ತೈಮ್ ಗೋತ್ರದವರು ಬಂದು ಅವರನ್ನು ಕುರೈಷರಿಂದ ಪಾರು ಮಾಡಿ ಒಂದು ಬಟ್ಟೆಯಲ್ಲಿ ಸುತ್ತಿ ಮನೆಗೆ ಒಯ್ದರು. ಅಬೂ ಬಕರ್ ಬದುಕುಳಿಯುವುದೇ ಕಷ್ಟ ಎನ್ನುವಷ್ಟರ ಮಟ್ಟಿಗೆ ಜರ್ಜರಿತರಾಗಿದ್ದರು.
ದುರ್ಬಲರಿಗೆ ಮತ್ತು ಗುಲಾಮರಿಗೆ ಸಹಾಯ
[ಬದಲಾಯಿಸಿ]ಮಕ್ಕಾದಲ್ಲಿ ದಿನಗಳೆದಂತೆ ಕುರೈಷರ ಹಿಂಸೆ ತೀವ್ರವಾಗುತ್ತಿತ್ತು. ಇಸ್ಲಾಮ್‌ಗೆ ಮತಾಂತರವಾದ ತಮ್ಮ ಗುಲಾಮರಿಗೆ ಹಿಂಸೆ ಕೊಟ್ಟು ಆನಂದಿಸುವುದು ಕುರೈಷರಿಗೆ ಹವ್ಯಾಸವಾಯಿತು. ಆ ಬಡಪಾಯಿಗಳನ್ನು ಕೇಳುವವರಾರೂ ಇರಲಿಲ್ಲ. ಅವರ ಪರವಾಗಿ ವಾದಿಸಲು ಯಾವುದೇ ಗೋತ್ರಗಳಿರಲಿಲ್ಲ. ಆಗ ಅಬೂಬಕರ್ ಮುಂದೆ ಬಂದು ಆ ಬಡಪಾಯಿ ಗುಲಾಮರನ್ನು ಅವರ ಯಜಮಾನರಿಂದ ಅವರು ಕೇಳಿದಷ್ಟು ಹಣ ಕೊಟ್ಟು ಖರೀದಿಸಿ ಸ್ವತಂತ್ರಗೊಳಿಸತೊಡಗಿದರು. ಅವರು ಮೊತ್ತಮೊದಲು ಉಮಯ್ಯ ಬಿನ್ ಖಲಫ್‌ರಿಂದ ಅವರ ಗುಲಾಮ ಬಿಲಾಲ್ ಬಿನ್ ರಬಾಹ್‌ರನ್ನು ಖರೀದಿಸಿ ಸ್ವತಂತ್ರಗೊಳಿಸಿದರು. ನಂತರ ಆಮಿರ್ ಬಿನ್ ಫುಹೈರ, ಉಮ್ಮು ಉಬೈಸ್ (ಉಮೈಸ್), ಝುನೈರ, ಹಿಂದಿಯ್ಯ ಮತ್ತು ಆಕೆಯ ಮಗಳು, ಬನೂ ಮುಅಮ್ಮಿಲ್ ಗೋತ್ರದ ದಾಸಿ ಮುಂತಾದ ಅನೇಕ ಗುಲಾಮರನ್ನು ಖರೀದಿಸಿ ಸ್ವತಂತ್ರಗೊಳಿಸಿದರು.
ಹಿಜ್ರ
[ಬದಲಾಯಿಸಿ]ಮದೀನಕ್ಕೆ ಹಿಜ್ರ (ವಲಸೆ) ಹೋಗಲು ಮುಹಮ್ಮದ್‌ರಿಗೆ ಆಜ್ಞೆ ಬಂದಾಗ ಅವರು ನೇರವಾಗಿ ಅಬೂ ಬಕರ್‌ರ ಮನೆಗೆ ಬಂದು ವಿಷಯ ತಿಳಿಸಿದರು. ಮುಹಮ್ಮದ್‌ರ ಜೊತೆಗೆ ಹಿಜ್ರ ಮಾಡುವ ಅವಕಾಶ ಒದಗಿದ್ದಕ್ಕಾಗಿ ಅವರು ಅಪಾರ ಸಂತೋಷಪಟ್ಟರು. ಅವರು ಅದಕ್ಕಾಗಿ ಎಲ್ಲಾ ಸಿದ್ಧತೆಗಳನ್ನು ಮಾಡಿದರು. ಇಬ್ಬರೂ ಮಕ್ಕಾದ ಬಳಿಯಿರುವ ಸೌರ್ ಗುಹೆಯಲ್ಲಿ ಮೂರು ರಾತ್ರಿಗಳನ್ನು ಕಳೆದರು. ಮುಹಮ್ಮದ್‌ರ ಸುರಕ್ಷತೆಗೆ ಬೇಕಾದ ಎಲ್ಲಾ ಸಿದ್ಧತೆಗಳನ್ನೂ ಅಬೂಬಕರ್ ಮಾಡಿದ್ದರು. ಅನೇಕ ಅಡ್ಡಿ-ಆತಂಕಗಳನ್ನು ಎದುರಿಸಿದರೂ ಕೊನೆಗೆ ಇಬ್ಬರೂ ಸುರಕ್ಷಿತವಾಗಿ ಮದೀನಾ ತಲುಪಿದರು.
ಯುದ್ಧಗಳು
[ಬದಲಾಯಿಸಿ]ಅಬೂಬಕರ್ ಮುಹಮ್ಮದ್‌ರೊಡನೆ ಎಲ್ಲಾ ಯುದ್ಧಗಳಲ್ಲೂ ಪಾಲ್ಗೊಂಡಿದ್ದರು. ಬದ್ರ್ ಯುದ್ಧದ ಸಂದರ್ಭ ಅವರ ಮಗ ಅಬ್ದುರ್‍ರಹ್ಮಾನ್ ಮಕ್ಕಾ ಸೇನೆಯಲ್ಲಿದ್ದರು. ಇಸ್ಲಾಮ್‌ಗೆ ಸೇರಿದ ಬಳಿಕ ಅವರು ಅಬೂಬಕರ್‌ರೊಡನೆ: “ಬದ್ರ್ ಯುದ್ಧದಲ್ಲಿ ತಾವು ನನ್ನ ಮುಂಭಾಗದಲ್ಲಿದ್ದಿರಿ. ಆದರೆ ನಾನು ತಮ್ಮನ್ನು ಕೊಲ್ಲದೆ ದೂರ ಸರಿದುಬಿಟ್ಟೆ” ಎಂದು ಹೇಳಿದಾಗ ಅಬೂಬಕರ್, “ಒಂದು ವೇಳೆ ನಾನು ನಿನ್ನನ್ನು ನನ್ನ ಮುಂಭಾಗದಲ್ಲಿ ಕಂಡಿದ್ದರೆ ನಿನ್ನನ್ನು ಕೊಂದೇ ಬಿಡುತ್ತಿದ್ದೆ!” ಎಂದು ಹೇಳಿದರೆಂದು ನಂಬಲಾಗುತ್ತದೆ.
ಉಹುದ್ ಯುದ್ಧದ ಸಂದರ್ಭ ಮುಹಮ್ಮದ್ ಕೊಲೆಯಾದರೆಂಬ ವದಂತಿ ಹಬ್ಬಿದಾಗ ಮೊತ್ತಮೊದಲು ಜನರ ನಡುವಿನಿಂದ ಓಡಿ ಬಂದು ಮುಹಮ್ಮದ್‌ರ ಬಳಿ ತಲುಪಿದ್ದು ಅಬೂಬಕರ್. ನಂತರ ಅಬೂ ಉಬೈದ, ಅಲಿ ಬಿನ್ ಅಬೂ ತಾಲಿಬ್, ಝುಬೈರ್, ಉಮರ್ ಬಿನ್ ಖತ್ತಾಬ್ ಮುಂತಾದವರು ಬಂದರು.
ಅವರು ಬನೂ ನದೀರ್, ಬನೂ ಮುಸ್ತಲಕ್, ಖಂದಕ್, ಬನೂ ಕುರೈಝ, ಖೈಬರ್, ನಜ್ದ್ ದಂಡಯಾತ್ರೆ, ಬನೂ ಫಝಾರ, ಝಾತು ಸ್ಸಲಾಸಿಲ್ ಮುಂತಾದ ಎಲ್ಲಾ ಯುದ್ಧಗಳಲ್ಲೂ ಪಾಲ್ಗೊಂಡಿದ್ದರು. ಹುದೈಬಿಯಾ ಒಪ್ಪಂದದಲ್ಲೂ ಅವರು ಉಪಸ್ಥಿತರಿದ್ದರು.
ಮುಹಮ್ಮದ್‌ರ ಮರಣ
[ಬದಲಾಯಿಸಿ]ಮುಹಮ್ಮದ್ ನಿಧನರಾದಾಗ ಜನರು ಗೊಂದಲದಲ್ಲಿದ್ದರು. ಮುಹಮ್ಮದ್ ನಿಧನರಾದರೆಂದು ಒಪ್ಪಿಕೊಳ್ಳಲು ಅನುಯಾಯಿಗಳಲ್ಲಿ ಅನೇಕ ಮಂದಿ ಸಿದ್ಧರಾಗಲಿಲ್ಲ. ಉಮರ್ ಬಿನ್ ಖತ್ತಾಬ್ ಅದರ ಮುಂಚೂಣಿಯಲ್ಲಿದ್ದರು. ಆಗ ಅಬೂಬಕರ್ ಭಾಷಣವನ್ನು ಮಾಡುತ್ತಾ ಹೇಳಿದರು: “ಓ ಜನರೇ, ನಿಮ್ಮಲ್ಲಿ ಯಾರಾದರೂ ಮುಹಮ್ಮದ್‌ರನ್ನು ಆರಾಧಿಸುತ್ತಿದ್ದರೆ, ಇಗೋ ಮುಹಮ್ಮದ್ ಮರಣಹೊಂದಿದ್ದಾರೆ. ಆದರೆ ನಿಮ್ಮಲ್ಲಿ ಯಾರಾದರೂ ದೇವರನ್ನು ಆರಾಧಿಸುವುದಾದರೆ ಅವನೆಂದೂ ಮರಣಹೊಂದಲಾರ. ಅವನು ಎಂದೆಂದೂ ಜೀವಿಸಿರುವವನು.”
ನಂತರ ಅವರು ಈ ಪವಿತ್ರ ಕುರ್‌ಆನ್‌ನ ಈ ಶ್ಲೋಕವನ್ನು ಪಠಿಸಿದರು:
"ಮುಹಮ್ಮದ್ ಒಬ್ಬ ಪ್ರವಾದಿಯಲ್ಲದೆ ಇನ್ನೇನೂ ಅಲ್ಲ. ಅವರಿಗಿಂತ ಮೊದಲು ಅನೇಕ ಪ್ರವಾದಿಗಳು ಬಂದು ಹೋಗಿದ್ದಾರೆ. ಹೀಗಿರುವಾಗ, ಅವರು ನಿಧನರಾದರೆ ಅಥವಾ ಕೊಲೆಗೈಯಲ್ಪಟ್ಟರೆ ನೀವು ನಿಮ್ಮ ಹಿಮ್ಮಡಿಗಳಲ್ಲಿ ಓಡುವಿರಾ? ಯಾರಾದರೂ ಅವರ ಹಿಮ್ಮಡಿಗಳಲ್ಲಿ ಓಡಿ ಹೋದರೆ ಅದರಿಂದ ದೇವರಿಗೇನೂ ನಷ್ಟವಿಲ್ಲ. ಕೃತಜ್ಞರಾಗಿರುವವರಿಗೆ ದೇವರು ಸೂಕ್ತ ಪ್ರತಿಫಲವನ್ನು ನೀಡುವನು."
ಖಲೀಫ
[ಬದಲಾಯಿಸಿ]ಮುಹಮ್ಮದ್ ನಿಧನರಾದಾಗ ಮದೀನಾದ ಅನ್ಸಾರಿಗಳು ಸಕೀಫ ಬನೂ ಸಾಇದದಲ್ಲಿ ಒಟ್ಟುಗೂಡಿ ತಮಗೆ ಒಬ್ಬ ಖಲೀಫರನ್ನು ಆರಿಸಲು ಮುಂದಾದರು. ವಿಷಯ ತಿಳಿದ ಅಬೂಬಕರ್ ಮತ್ತು ಉಮರ್ ಬನೂ ಸಕೀಫಕ್ಕೆ ತೆರಳಿ ಅನ್ಸಾರಿಗಳೊಡನೆ ಸಮಾಲೋಚನೆ ಮಾಡಿದರು. ಮುಖಂಡತ್ವವು ಕುರೈಷ್ ವಂಶಸ್ಥರಿಗೆ ದೊರಕಬೇಕೆಂಬ ಮುಹಮ್ಮದ್‌ರ ಮಾತನ್ನು ನೆನಪಿಸಿದರು. ಅನ್ಸಾರಿಗಳು ಒಪ್ಪಿದರು. ನಂತರ ಎಲ್ಲರೂ ಸರ್ವಾನುಮತದಿಂದ ಅಬೂ ಬಕರ್‌ರನ್ನು ಖಲೀಫ ಆಗಿ ಆರಿಸಿದರು.
ಖಲೀಫರಾದ ಮರುದಿನ ಜನರೆಲ್ಲರೂ ಅವರಿಗೆ ಅನುಸರಣೆಯ ಪ್ರತಿಜ್ಞೆ ಮಾಡಿದ ನಂತರ ಅಬೂ ಬಕರ್ ಎದ್ದು ನಿಂತು ಭಾಷಣ ಮಾಡಿದರು: “ಓ ಜನರೇ, ನನ್ನನ್ನು ನಿಮ್ಮ ಮುಖಂಡನನ್ನಾಗಿ ಆರಿಸಲಾಗಿದೆ. ಆದರೆ ನಾನು ನಿಮಗಿಂತ ಒಳ್ಳೆಯವನಲ್ಲ. ನಾನು ಒಳಿತು ಮಾಡಿದರೆ ನನಗೆ ಸಹಾಯ ಮಾಡಿರಿ. ನಾನು ಕೆಡುಕು ಮಾಡಿದರೆ ನನ್ನನ್ನು ಸರಿಪಡಿಸಿರಿ. ಸತ್ಯವು ನಂಬಿಕೆಯಾಗಿದೆ ಮತ್ತು ಸುಳ್ಳು ನಂಬಿಕೆದ್ರೋಹವಾಗಿದೆ. ದೇವರು ಇಚ್ಛಿಸಿದರೆ ನಿಮ್ಮ ಪೈಕಿ ಬಲಹೀನರ ಹಕ್ಕುಗಳನ್ನು ನಾನು ಅವರಿಗೆ ದೊರಕಿಸಿಕೊಡುವೆನು. ಅಲ್ಲಿಯ ತನಕ ಅವರು ನನ್ನ ಪಾಲಿಗೆ ಬಲಶಾಲಿಗಳಾಗಿದ್ದಾರೆ. ದೇವರು ಬಯಸಿದರೆ ನಿಮ್ಮ ಪೈಕಿ ಬಲಶಾಲಿಗಳಿಂದ ಬಡಪಾಯಿಗಳ ಹಕ್ಕುಗಳನ್ನು ತೆಗೆದುಕೊಳ್ಳುವೆನು. ಅಲ್ಲಿಯ ತನಕ ಅವರು ನನ್ನ ಪಾಲಿಗೆ ಬಲಹೀನರಾಗಿದ್ದಾರೆ. ನಾನು ದೇವರನ್ನು ಮತ್ತು ಪ್ರವಾದಿಯನ್ನು ಅನುಸರಿಸುವ ತನಕ ನೀವು ನನ್ನನ್ನು ಅನುಸರಿಸಿರಿ. ನಾನು ದೇವರನ್ನು ಮತ್ತು ಪ್ರವಾದಿಯನ್ನು ಅನುಸರಿಸದಿದ್ದರೆ ನೀನು ನನ್ನನ್ನು ಅನುಸರಿಸಬೇಕಾಗಿಲ್ಲ. ಜನರೇ ನಮಾಝ್ ಮಾಡಲು ಹೊರಡಿ. ದೇವರು ನಿಮಗೆ ದಯೆ ತೋರಲಿ.”
ಸಾಮ್ರಾಜ್ಯ ವಿಸ್ತರಣೆ
[ಬದಲಾಯಿಸಿ]ಮುಹಮ್ಮದ್ ತಮ್ಮ ಕೊನೆಯ ಕಾಲದಲ್ಲಿ ಬೈಝಾಂಟೈನ್ ಸಾಮ್ರಾಜ್ಯದ ವಿರುದ್ಧ ಹೋರಾಡಲು ಉಸಾಮ ಬಿನ್ ಝೈದ್‌ರ ಸೇನಾಧಿಪತ್ಯದಲ್ಲಿ ಸೈನ್ಯವನ್ನು ಕಳುಹಿಸಿದ್ದರು. ಆದರೆ ಅವರ ನಿಧನದ ಸುದ್ದಿ ತಿಳಿದು ಸೈನವು ಮದೀನಕ್ಕೆ ಹಿಂದಿರುಗಿತ್ತು. ಖಲೀಫರಾದ ನಂತರ ಅಬೂಬಕರ್ ಆ ಸೈನ್ಯವನ್ನು ಪುನಃ ಬೈಝಾಂಟೈನ್ ಸಾಮ್ರಾಜ್ಯದ ವಿರುದ್ಧ ಹೋರಾಡಲು ಕಳುಹಿಸಿದರು.
ಮುಹಮ್ಮದ್‌ರ ನಿಧನದ ಸುದ್ದಿ ತಿಳಿದು ಅನೇಕ ಅರೇಬಿಯನ್ ಗೋತ್ರಗಳು ಧರ್ಮಪರಿತ್ಯಾಗ ಮಾಡಿದವು. ಅವರಲ್ಲಿ ಕೆಲವರು ವಿಗ್ರಹಾರಾಧನೆಗೆ ಮರಳಿದರೆ, ಬೇರೆ ಕೆಲವರು ಮುಸೈಲಿಮ ಕಝ್ಝಾಬ್ ಮತ್ತು ಅಸ್ವದ್ ಅನ್ಸಿಯಂತಹ ಸುಳ್ಳು ಪ್ರವಾದಿಗಳ ಹಿಂಬಾಲಕರಾದರು. ಇನ್ನು ಕೆಲವರು ಮುಸ್ಲಿಂ ಆಡಳಿತಕ್ಕೆ ಝಕಾತ್ ಕೊಡುವುದನ್ನು ನಿರಾಕರಿಸಿದರು. ಅಬೂ ಬಕರ್ ಈ ಆಂತರಿಕ ಬಂಡಾಯಗಳನ್ನು ಯಶಸ್ವಿಯಾಗಿ ನಿಗ್ರಹಿಸಿದರು.
ಮರಣ
[ಬದಲಾಯಿಸಿ]15 ದಿನಗಳ ಕಾಲ ಜ್ವರ ಬಾಧಿತರಾಗಿ, ಹಿಜರಿ 13, ಜುಮಾದಾ ಆಖಿರ 22 ಸೋಮವಾರ ರಾತ್ರಿ (ಕ್ರಿ.ಶ. 23 ಆಗಸ್ಟ್ 634) ಅಬೂ ಬಕರ್ ನಿಧನರಾದರು. ಅವರನ್ನು ಆಯಿಶರ ಮನೆಯಲ್ಲಿ ಮುಹಮ್ಮದ್‌ರ ಸಮಾಧಿಯ ಬಳಿಯಲ್ಲೇ ಸಮಾಧಿ ಮಾಡಲಾಯಿತು.
ಪತ್ನಿಯರು
[ಬದಲಾಯಿಸಿ]- ಕುತೈಲ ಬಿನ್ತ್ ಅಬ್ದುಲ್ ಉಝ್ಝ
- ಉಮ್ಮು ರೂಮಾನ್ ಬಿನ್ತ್ ಆಮಿರ್
- ಅಸ್ಮಾ ಬಿನ್ತ್ ಉಮೈಸ್
- ಹಬೀಬ ಬಿನ್ತ್ ಖಾರಿಜ
ಮಕ್ಕಳು:
[ಬದಲಾಯಿಸಿ]ಗಂಡು ಮಕ್ಕಳು
[ಬದಲಾಯಿಸಿ]- ಅಬ್ದುರ್‍ರಹ್ಮಾನ್ (ತಾಯಿ: ಉಮ್ಮು ರೂಮಾನ್ ಬಿನ್ತ್ ಆಮಿರ್)
- ಅಬ್ದುಲ್ಲಾಹ್ (ತಾಯಿ: ಕುತೈಲ ಬಿನ್ ಅಬ್ದುಲ್ ಉಝ್ಝ)
- ಮುಹಮ್ಮದ್ (ತಾಯಿ: ಅಸ್ಮಾ ಬಿನ್ತ್ ಉಮೈಸ್)
ಹೆಣ್ಣು ಮಕ್ಕಳು
[ಬದಲಾಯಿಸಿ]- ಅಸ್ಮಾ (ತಾಯಿ: ಕುತೈಲ ಬಿನ್ ಅಬ್ದುಲ್ ಉಝ್ಝ)
- ಆಯಿಶ (ತಾಯಿ: ಉಮ್ಮು ರೂಮಾನ್ ಬಿನ್ತ್ ಆಮಿರ್)
- ಉಮ್ಮು ಕುಲ್ಸೂಮ್ (ತಾಯಿ: ಹಬೀಬ ಬಿನ್ತ್ ಖಾರಿಜ)