ಹೆನ್ರಿ ಬೆಸ್ಸೆಮರ್
ಹೆನ್ರಿ ಬೆಸ್ಸೆಮರ್ | |
---|---|
ಜನನ | ಜನವರಿ ೧೯, ೧೮೧೩ ಚಾರ್ಲ್‍ಟನ್, ಹರ್ಟ್‍ಫೋರ್ಡ್‍ಶಯರ್, ಇಂಗ್ಲಂಡ್ |
ಮರಣ | ಮಾರ್ಚ್ ೧೫, ೧೮೯೮ ಲಂಡನ್ |
ರಾಷ್ಟ್ರೀಯತೆ | ಇಂಗ್ಲಿಶ್ |
ಕಾರ್ಯಕ್ಷೇತ್ರಗಳು | ಭೌತಶಾಸ್ತ್ರ |
ಪ್ರಸಿದ್ಧಿಗೆ ಕಾರಣ | ಬೆಸ್ಸೆಮರ್ ವಿಧಾನ |
ಸರ್ ಹೆನ್ರಿ ಬೆಸ್ಸೆಮರ್ (ಜನವರಿ ೧೯, ೧೮೧೩ - ಮಾರ್ಚ್ ೧೫, ೧೮೯೮) ಒಬ್ಬ ಇಂಗ್ಲಿಷ್ ಇಂಜಿನಿಯರ್, ಸಂಶೋಧಕ, ಮತ್ತು ಉದ್ಯಮಿ. ಉಕ್ಕು ತಯಾರಿಕೆಯಲ್ಲಿ ಬಳಸುವ ಬೆಸ್ಸೆಮರ್ ವಿಧಾನದ ಜೊತೆ ಈತನ ಹೆಸರು ತಳುಕು ಹಾಕಿಕೊಂಡಿದೆ. ತನ್ನ ೨೬ನೆಯ ವಯಸ್ಸನಲ್ಲೆ ಈತ ಫ್ರೆಂಚ್ ವಿಜ್ಞಾನ ಅಕಾಡೆಮಿಯ ಸದಸ್ಯನಾಗಿದ್ದ[೧].
ಬೆಸ್ಸೆಮರ್ ಉಕ್ಕು ತಯಾರಿಯಲ್ಲಿ ಸುಧಾರಣೆಗಳನ್ನು ಮಾಡಲು ಶ್ರಮಿಸುತ್ತಿದ್ದನು. ಸರಕಾರದ ಶಸ್ತ್ರಾಸ್ತ್ರ ತಯಾರಿಯಲ್ಲಿ ಸುಧಾರಣೆ ತರುವುದು ಆತನ ಉದ್ದೇಶವಾಗಿತ್ತು. ಪೆಡಸು ಕಬ್ಬಿಣದ ಮೂಲಕ ಆಮ್ಲಜನಕವನ್ನು ಹಾಯಿಸುವ ಮೂಲಕ ಕಲ್ಮಶಗಳನ್ನು ತೆಗೆಯುವ ವಿಧಾನವನ್ನು ಈತ ಸಂಶೋಧಿಸಿದನು. ಈ ವಿಧಾನವನ್ನು ಬಳಸುವ ಮೂಲಕ ಉಕ್ಕು ತಯಾರಿಯಲ್ಲಿ ಕ್ರಾಂತಿಯಾಯಿತು. ಉಕ್ಕು ತಯಾರಿ ಸರಳ ಮತ್ತು ವೇಗವಾಯಿತು. ಬೆಸ್ಸೆಮರ್ ಇನ್ನೂ ನೂರಾರು ಸಂಶೋಧನೆಗಳನ್ನು ಮಾಡಿದ್ದನು. ಅವುಗಳು ಕಬ್ಬಿಣ, ಉಕ್ಕು ಮತ್ತು ಗಾಜು ಕ್ಷೇತ್ರಗಳಲ್ಲಿದ್ದವು.
ಪ್ರಾರಂಭದ ಸಂಶೋಧನೆಗಳು
[ಬದಲಾಯಿಸಿ]ಪ್ರಾರಂಭದಲ್ಲಿ ಬೆಸ್ಸೆಮರ್ ಕಂಚಿನ ಪುಡಿಗಳನ್ನು ಹಬೆಯ ಯಂತ್ರಗಳನ್ನು ಬಳಸುವ ಮೂಲಕ ತಯಾರಿಸಿ ಅವನ್ನು ಚಿನ್ನದ ಬಣ್ಣ ತಯಾರಿಯಲ್ಲಿ ಬಳಸಿದನು[೨]. ಈ ಸಂಶೋಧನೆಯನ್ನು ಆತ ಗೌಪ್ಯವಾಗಿಟ್ಟಿದ್ದನು. ಈ ಬಣ್ಣವನ್ನು ಮಾರುವ ಮೂಲಕ ಸಂಪಾದಿಸಿದ ಹಣ ಆತನ ಇತರೆ ಸಂಶೋಧನೆಗಳಿಗೆ ಉಪಯೋಗಿಯಾಯಿತು.
ಬೆಸ್ಸೆಮರ್ ವಿಧಾನ
[ಬದಲಾಯಿಸಿ]೧೮೫೦ರಿಂದ ೧೮೫೫ರ ತನಕ ಹೆನ್ರಿ ಬೆಸ್ಸೆಮರ್ ಅಗ್ಗದಲ್ಲಿ ಉಕ್ಕು ತಯಾರಿಯ ಬಗ್ಗೆ ಸರಕಾರದ ಶಸ್ತ್ರಾಸ್ತ್ರ ತಯಾರಿಯವ ವಿಭಾಗಕ್ಕಾಗಿ ಸೊಂಶೋಧನೆ ಮಾಡುತ್ತಿದ್ದನು. ಈ ಸಮಯದಲ್ಲಿ ಆತ ಬೆಸ್ಸೆಮರ್ ವಿಧಾನವನ್ನು ಕಂಡುಹಿಡಿದು ಅದನ್ನು ಪೇಟೆಂಟ್ ಮಾಡಿದನು[೩]. ೧೮೫೬ರ ಆಗಸ್ಟ್ ೨೪ರಂದು ಹೆನ್ರಿ ಬೆಸ್ಸೆಮರ್ ತನ್ನ ಬೆಸ್ಸೆಮರ್ ವಿಧಾನವನ್ನು ಒಂದು ಸಭೆಯಲ್ಲಿ ವಿವರಿಸಿದನು. ಆತನ ಸಂಶೋಧನೆ ಟೈಮ್ಸ್ ಪತ್ರಿಕೆಯಲ್ಲಿ ಪ್ರಕಟವಾಯಿತು. ಬೆಸ್ಸೆಮರ್ ವಿಧಾನದಲ್ಲಿ ಕರಗಿದ ಪೆಡಸು ಕಬ್ಬಿಣದ ಮೂಲಕ ಆಮ್ಲಜನಕವನ್ನು ಹಾಯಿಸಿ ಕಶ್ಮಲವನ್ನಿ ನಿವಾರಿಸಿ ಉಕ್ಕನ್ನು ತಯಾರಿಸಲಾಗುತ್ತದೆ. ಈಗ ಈ ವಿಧಾನವನ್ನು ಯಾರೂ ಬಳಸುತ್ತಿಲ್ಲವಾದರೂ ಆ ಕಾಲದಲ್ಲಿ ಅದು ಉಕ್ಕಿನ ತಯಅರಿಕೆಯ ವೆಚ್ಚವನ್ನು ಗಣನೀಯವಾಗಿ ಕಡಿಮೆ ಮಾಡಿತ್ತು.
ಇತರೆ ಸಂಶೋಧನೆಗಳು
[ಬದಲಾಯಿಸಿ]ಹೆನ್ರಿ ಬೆಸ್ಸೆಮರ್ ಒಬ್ಬ ದಣಿವಿಲ್ಲದ ಸಂಶೋಧಕನಾಗಿದ್ದ. ೧೮೩೮ರಿಂದ ೧೮೮೩ರ ತನಕದ ಅವಧಿಯಲ್ಲಿ ಆತ ನೂರಾರು ಸಂಶೋಧನೆಗಳನ್ನು ಮಾಡಿ ೧೨೯ ಪೇಟೆಂಟುಗಳನ್ನು ಪಡೆದುಕೊಂಡಿದ್ದ. ಈ ಸಂಶೋಧನೆಗಳು ಕಬ್ಬಿಣ, ಉಕ್ಕು ಮತ್ತು ಗಾಜುಗಳಿಗೆ ಸಂಬಂದಿಸಿದವಾಗಿದ್ದವು. ಅವುಗಳಲ್ಲಿ ಪ್ರಮುಖವಾದವೆಂದರೆ ಅಂಚೆ ಸ್ಟಾಂಪುಗಳ ತಯಾರಿಗೆ ಎರಕದ ಅಚ್ಚು, ಕಬ್ಬಿನಿಂದ ಸಕ್ಕರೆಯ ತಯಾರಿಯ ಒಂದು ವಿಧಾನ, ಹಾಗೂ ಶಸ್ತ್ರಾಸ್ತ್ರ ತಯಾರಿಯ ಕೆಲವು ಸಂಶೋಧನೆಗಳಾಗಿದ್ದವು.
ಪ್ರಶಸ್ತಿ ಮತ್ತು ಗೌರವಗಳು
[ಬದಲಾಯಿಸಿ]- ಬ್ರಿಟಿಷ್ ರಾಣಿಯಿಂದ ಸರ್ ಪದವಿ (ಜೂನ್ ೨೬, ೧೮೭೯)
- ರಾಯಲ್ ಸೊಸೈಟಿಯ ಫೆಲೊ
- ಸ್ಕಾಟ್‍ಲ್ಯಾಂಡಿನ ಇಂಜಿನಿಯರುಗಳ ಮತ್ತು ಹಡಗು ಕಟ್ಟುವವರ ಸಂಸ್ಥೆಯಿಂದ ಗೌರವ ಸದಸ್ಯತ್ವ[೪]
- ಅಮೆರಿಕನ್ ಅಕಾಡೆಮಿ ಆಫ್ ಆರ್ಟ್ಸ್ ಆಂಡ್ ಸಯನ್ಸಸ್‍ನ ಗೌರವ ಸದಸ್ಯತ್ವ[೫]
ಉಲ್ಲೇಖ
[ಬದಲಾಯಿಸಿ]- ↑ ವಿಲಿಯಂ ಟಿ. ಜೀನ್ಸ್, ದಿ ಕ್ರಿಯೇಟರ್ಸ್ ಆಪ್ ದಿ ಏಜ್ ಸ್ಟೀಲ್, ಚಾಪ್‍ಮನ್ ಆಂಡ್ ಹಾಲ್, ೧೮೮೪, ಪು.೧೨-೧೩
- ↑ ಬೆಸ್ಸೆಮರ್‍ನ ಆತ್ಮಚರಿತ್ರೆ www.history.rochester.edu/ehp-book/shb/start.htm
- ↑ Boylston, Herbert Melville (1936). An introduction to the metallurgy of iron and steel. J. Wiley & sons, inc. p. 218.
- ↑ http://www.iesis.org/honorary-fellows.html
- ↑ http://www.amacad.org/publications/BookofMembers/ChapterB.pdf