ಪೋತನ್ ಜೋಸೆಫ್
ಪೋತನ್ ಜೋಸೆಫ್ (1892-1972). ಭಾರತದ ಒಬ್ಬ ಪ್ರಸಿದ್ಧ ಪತ್ರಿಕೋದ್ಯಮಿ. ಭಾರತದ ಅನೇಕ ಇಂಗ್ಲಿಷ್ ಪತ್ರಿಕೆಗಳ ಸಂಪಾದಕರಾಗಿ ನಾಲ್ಕು ದಶಕಗಳಿಗಿಂತ ಹೆಚ್ಚು ಕಾಲ ಇವರು ಪತ್ರಿಕೋದ್ಯಮಕ್ಕೆ ಸೇವೆ ಸಲ್ಲಿಸಿದ್ದರು. ಅಲ್ಲದೆ ಇವರು ಅನೇಕ ಯುವಕ ಪತ್ರಿಕೋದ್ಯಮಿಗಳಿಗೆ ಪ್ರೋತ್ಸಾಹ ನೀಡಿದರು. ಇವರು ಬರೆಯುತ್ತಿದ್ದ ಓಹಸ್ತಿವರ್ ಎ ಕಪ್ ಆಫ್ ಟೀ ಎಂಬ ದೈನಿಕ ಲಘುಟಿಪ್ಪಣಿಗಳು ವ್ಯಂಗ್ಯ ಹಾಸ್ಯ ವಿದ್ವತ್ತು ಅನುಭವಗಳ ಕಲಾಪೂರ್ಣ ಸಂಗಮವಾಗಿ, ಈ ಬಗೆಯ ಸುರಸ ಹರಿತ ಬರೆವಣಿಗೆಗೆ ಮಾದರಿಯಾಗಿ ಬಹಳ ಜನಪ್ರಿಯವಾಗಿತ್ತು. ಇವರ ಅಗ್ರ ಲೇಖನಗಳು ತೀಕ್ಷ್ಣವಾಗಿಯೂ ಬುದ್ಧಿಪ್ರಚೋದಕವಾಗಿಯೂ ಇರುತ್ತಿದ್ದುವು.
ಬದುಕು
[ಬದಲಾಯಿಸಿ]ಜೋಸೆಫರ ಜನನ 1892ರಲ್ಲಿ. ತಿರುವಾಂಕೂರಿನ ಆರ್ತೋಡಾಕ್ಸ್ ಕ್ರಿಶ್ಚನ್ ಕುಟುಂಬವೊಂದರಲ್ಲಿ. ತಂದೆ ಸಿ. ಐ. ಜೋಸೆಫ್, ತಾಯಿ ಸರಾ. ಇವರು ತಮ್ಮ ಹಿರಿಯಣ್ಣ ಜಾರ್ಜ್ ಜೋಸೆಫ್ ಆಶ್ರಯದಲ್ಲಿ ಬೆಳೆದರು. ಜಾರ್ಜ್ ಜೋಸೆಫ್ ಗಾಂಧೀಜಿಯ ಅನುಯಾಯಿಯಾಗಿದ್ದರು. ಪೋತನ್ ಜೋಸೆಫ್‍ರು ಮದ್ರಾಸಿನ ಪ್ರೆಸಿಡೆನ್ಸಿ ಕಾಲೇಜಿನಲ್ಲೂ ಮುಂಬಯಿಯ ನ್ಯಾಯಶಾಸ್ತ್ರ ಶಾಲೆಯಲ್ಲೂ ಓದಿದರು. ಇವರ ವಿವಾಹವಾದದ್ದು 1911ರಲ್ಲಿ. ಇವರು ಟ್ರಿನಿಟಿ ಕಾಲೇಜಿನಲ್ಲಿ ಸ್ವಲ್ಪ ಕಾಲ ಅಧ್ಯಾಪಕರಾಗಿದ್ದರು. ಅನಂತರ ಇವರು ಪತ್ರಿಕೋದ್ಯಮಿಯಾದರು. ಹೈದರಾಬಾದ್ ಬುಲೆಟಿನ್, ಡೇಲಿ ಟೆಲಿಗ್ರಾಫ್, ಬಾಂಬೇ ಕ್ರಾನಿಕಲ್, ಕ್ಯಾಪಿಟಲ್, ವಾಯ್ಸ್ ಆಫ್ ಇಂಡಿಯ, ಇಂಡಿಯನ್ ಡೇಲಿ ಮೇಲ್, ಹಿಂದೂಸ್ತಾನ್ ಟೈಮ್ಸ್ ಮೊದಲಾದ ಪತ್ರಿಕೆಗಳಲ್ಲಿ ಇವರು ಕೆಲಸ ಮಾಡಿದರು. ಮಹಾತ್ಮ ಗಾಂಧಿಯವರು ಸಂಪಾದಿಸುತ್ತಿದ್ದ ಯಂಗ್ ಇಂಡಿಯ ಪತ್ರಿಕೆಯಲ್ಲಿ ಸ್ವಲ್ಪ ಕಾಲ ಇವರು ಸಹಾಯಕ ಸಂಪಾದಕರಾಗಿದ್ದರು. ಸ್ಟಾರ್ ಆಫ್ ಇಂಡಿಯ ಮತ್ತು ಇಂಡಿಯನ್ ಎಕ್ಸ್‍ಪ್ರೆಸ್ ಸಂಪಾದಕರಾಗಿಯೂ ಇವರು ಕೆಲಸ ಮಾಡಿದರು.
ಭಾರತದ ಸ್ವಾತಂತ್ರ್ಯ ಪೂರ್ವದ ಕಾಲದಲ್ಲಿ ದಿಲ್ಲಿಯಿಂದ ಪ್ರಕಟವಾಗುತ್ತಿದ್ದ ಮುಸ್ಲಿಂ ಲೀಗಿನ ಮುಖಪತ್ರ ಡಾನ್‍ಗೆ ಇವರು ಪ್ರಥಮ ಸಂಪಾದಕರಾಗಿದ್ದರು. 1948ರಿಂದ ಹತ್ತು ವರ್ಷಗಳ ಕಾಲ ಇವರು ಬೆಂಗಳೂರಿನ ಡೆಕ್ಕನ್ ಹೆರಾಲ್ಡ್ ಪತ್ರಿಕೆಯ ಪ್ರಥಮ ಸಂಪಾದಕರಾಗಿ ಆ ಪತ್ರಿಕೆಯನ್ನು ಬೆಳೆಸಿದರು. ಇವರು ಪತ್ರಿಕಾವೃತ್ತಿಯ ಅವಧಿಯಲ್ಲಿ ನಡುವೆ ಸ್ವಲ್ಪ ಕಾಲ ಜಿ.ಐ.ಪಿ. ರೈಲ್ವೆಯ ಸಾರ್ವಜನಿಕ ಸಂಪರ್ಕಾಧಿಕಾರಿಯೂ ಭಾರತ ಸರ್ಕಾರದ ಮುಖ್ಯ ವಾರ್ತಾಧಿಕಾರಿಯೂ ಆಗಿದ್ದರು.
ಡೆಕ್ಕನ್ ಹೆರಾಲ್ಡ್ ಪತ್ರಿಕೆಯ ಸಂಪಾದಕತ್ವವನ್ನು ಬಿಟ್ಟು ಸ್ವಲ್ಪಕಾಲದ ಮೇಲೆ, ಸ್ವತಂತ್ರ ಪಕ್ಷದ ಮುಖಪಾತ್ರವಾದ ಸ್ವರಾಜ್ಯ ವಾರಪತ್ರಿಕೆಯ ಸಂಪಾದಕರಾಗಿದ್ದ ಖಾಸಾ ಸುಬ್ಬರಾಯರು ತೀರಿಕೊಂಡಾಗ, ಜೋಸೆಫರು ಆ ಪತ್ರಿಕೆಯ ಸಂಪಾದಕರಾಗಿದ್ದರು. ಜೋಸೆಫರು ನಿಧನರಾಗುವುದಕ್ಕೆ ಎರಡು ವರ್ಷ ಹಿಂದಿನ ವರೆಗೂ ಆ ಕೆಲಸ ನಿರ್ವಹಿಸುತ್ತಿದ್ದರು. ಇವರು ತೀರಿಕೊಂಡದ್ದು 1972ರ ಸೆಪ್ಟಂಬರ್ 2 ರಂದು. ಪೋತನ್ ಜೋಸೆಫ್ 1957ರಲ್ಲಿ ಹೆಲ್ಸಿಂಕಿಯಲ್ಲಿ ಜರುಗಿದ ಕಾರ್ಯನಿರತ ಪತ್ರಿಕೋದ್ಯಮಿಗಳ ಪ್ರಥಮ ಅಂತರರಾಷ್ಟ್ರೀಯ ಪರಿಷತ್ತಿನಲ್ಲಿ ಭಾಗವಹಿಸಿದ ಭಾರತೀಯ ಪತ್ರಿಕೋದ್ಯಮಿಗಳ ನಿಯೋಗದ ನಾಯಕರಾಗಿದ್ದರು. 1962-63ರಲ್ಲಿ ಕಾರ್ಯನಿರತ ಪತ್ರಿಕೋದ್ಯಮಿಗಳ ಮಹಾಸಂಘದ ಅಧ್ಯಕ್ಷರಾಗಿದ್ದರು.
ಸಂದ ಗೌರವಗಳು
[ಬದಲಾಯಿಸಿ]ಅವರಿಗೆ ಮರಣೋತ್ತರವಾಗಿ ೧೯೭೩ ರಲ್ಲಿ ಭಾರತ ಸರಕಾರದ ಉನ್ನತ ಪ್ರಶಸ್ತಿಗಳಲ್ಲೊಂದಾದ ಪದ್ಮಭೂಷಣ ಪ್ರಶಸ್ತಿಯನ್ನು ಕೊಡಲಾಗಿದೆ.