ಟುಫ್
ಟುಫ್- ಜ್ವಾಲಾಮುಖಿಯಿಂದ ನೇರ ಹೊರಚಿಮ್ಮಿದ ವಸ್ತುವಿನಲ್ಲಿನ ಬೂದಿ ಮತ್ತು 4ಮಿಮೀ ಗಿಂತಲೂ ಕಿರಿಯ ಗಾತ್ರದ ತುಣುಕುಗಳು ಒಟ್ಟಾಗಿ ಮೈದಳೆದ ಪದಾರ್ಥ. ಜ್ವಾಲಾಮುಖಿಯ ಸ್ಫೋಟನೆಯ ವೇಳೆಯಲ್ಲಿ ಶಿಲಾರಸ ಮತ್ತು ಅನಿಲಗಳಷ್ಟೆ ಅಲ್ಲದೆ ನಾನಾ ಆಕಾರ ಮತ್ತು ಗಾತ್ರದ ಘನವಸ್ತುಗಳೂ ಹೇರಳವಾಗಿ ಹೊರಬರುತ್ತವೆ. ಇವು ಕಾಲಕ್ರಮದಲ್ಲಿ ಬಂಧಿಸಿ ಗಟ್ಟಿಯಾಗಿ ಒಂದು ವಿಧವಾದ ಅಗ್ನಿಶಿಲೆಗಳಾಗಿ ಮೈದಳೆಯುತ್ತವೆ. ಇಂಥ ಶಿಲೆಗಳಿಗೆ ಚೂರುಗಲ್ಲಿನ ಅಗ್ನಿಶಿಲೆಗಳು ಎಂದು ಹೆಸರು. ಟುಫ್ ಕೂಡ ಈ ಗುಂಪಿಗೆ ಸೇರಿದ ಒಂದು ಜ್ವಾಲಾಮುಖಿಜ ಅಗ್ನಿಶಿಲೆ.
ಜ್ವಾಲಾಮುಖಿಯಿಂದ ಉಚ್ಚಾಟಿಸಲ್ಪಟ್ಟ ಘನವಸ್ತುಗಳು
[ಬದಲಾಯಿಸಿ]ಜ್ವಾಲಾಮುಖಿಯಿಂದ ಉಚ್ಚಾಟಿಸಲ್ಪಟ್ಟ ಘನವಸ್ತುಗಳನ್ನು ಅವುಗಳ ಗಾತ್ರಾನುಸಾರವಾಗಿ ನಾಲ್ಕು ವರ್ಗಗಳಾಗಿ ವಿಂಗಡಿಸಬಹುದು :
ಬ್ಲಾಕ್ಸ್
[ಬದಲಾಯಿಸಿ]ಜ್ವಾಲಾಮುಖಿದ್ವಾರ ಅಥವಾ ಶಂಕುವಿನ ಬಿರಿತದಿಂದ ಉಂಟಾದ 32 ಮಿಮೀ ಗಿಂತ ಅಧಿಕ ವ್ಯಾಸದ ಘನವಸ್ತುಗಳು. ಇವುಗಳಿಗೆ ಗುಂಡುಗಳೆಂದು (ಬ್ಲಾಕ್ಸ್) ಹೆಸರು.
ಬಾಂಬುಗಳು
[ಬದಲಾಯಿಸಿ]ವಾಯು ಮಂಡಲದೊಳಕ್ಕೆ ಚಿಮ್ಮಲ್ಪಟ್ಟ ಶಿಲಾರಸದ ಘನೀಭವನದಿಂದ ಉಂಟಾದ ಅದೇ ಗಾತ್ರದ ಘನವಸ್ತುಗಳು. ಇವುಗಳಿಗೆ ಬಾಂಬುಗಳೆಂದು ಹೆಸರು.
ಲ್ಯಾಪಿಲ್ಲಿಗಳು
[ಬದಲಾಯಿಸಿ]ವ್ಯಾಸವ್ಯಾಪ್ತಿ 32-4 ಮಿಮೀ ಇರುವ ಘನವಸ್ತುಗಳು. ಇವುಗಳಿಗೆ ಲ್ಯಾಪಿಲ್ಲಿಗಳೆಂದು ಹೆಸರು.
ಬೂದಿ
[ಬದಲಾಯಿಸಿ]ವ್ಯಾಸವ್ಯಾಪ್ತಿ 4-0.5 ಮಿಮೀ ಇರುವ ಘನವಸ್ತುಗಳು. ಇವುಗಳಿಗೆ ಬೂದಿ ಎಂದು ಹೆಸರು. (0.5 ಮಿಮೀ ಗಿಂತ ಕಡಿಮೆ ವ್ಯಾಸದ ಘನವಸ್ತುಗಳಿಗೆ ದೂಳು ಎಂದು ಹೆಸರು. )
ಈ ಘನವಸ್ತುಗಳಿಂದಾದ ಶಿಲೆಗಳು
[ಬದಲಾಯಿಸಿ]ಈ ಘನವಸ್ತುಗಳು ಸಂಘಟಿಸಿ ಶಿಲೆಗಳಾಗುತ್ತವೆ. ಗುಂಡುಗಳ ಸಂಘಟನೆಯಿಂದ ಉಂಟಾದ ಶಿಲೆಗೆ ಜ್ವಾಲಾಮುಖಿಜ ಬ್ರಿಕ್ಷಿಯ, ಬಾಂಬುಗಳಿಂದ ಉಂಟಾದ ಶಿಲೆಗೆ ಆಗ್ಲಾಮರೇಟ್, ಲ್ಯಾಪಿಲ್ಲಿಗಳಿಂದ ಉಂಟಾದ ಶಿಲೆಗೆ ಲ್ಯಾಪಿಲ್ಲಿ ಟುಫ್, ಬೂದಿ ಮತ್ತು ದೂಳಿನ ಶಿಲೀಕರಣದಿಂದ ಉಂಟಾದ ಶಿಲೆಗೆ ಟುಫ್ ಎಂದು ಹೆಸರು, ಟುಫ್‍ಗಳನ್ನು ಅವುಗಳ ಸಂಯೋಜನೆಯ ಆಧಾರದ ಮೇಲೆ ಗಾಜು ಟುಫ್, ಸ್ಫಟಿಕ ಟುಫ್, ಶಿಲಾ ಟುಫ್‍ಗಳೆಂಬ ಮೂರು ವರ್ಗಗಳಾಗಿ ವಿಂಗಡಿಸಬಹುದು.
ಜ್ವಾಲಾಮುಖಿಯಿಂದ ಎಸೆಯಲ್ಪಟ್ಟ ಘನವಸ್ತುಗಳು ಕೆಲವು ಸಾರಿ ನೇರವಾಗಿ ಜಲಜಶಿಲೆಗಳು ರೂಪುಗೊಳ್ಳುತ್ತಿರುವ ಸಂಚಯನ ಪ್ರದೇಶಗಳಲ್ಲಿ ಬೀಳಬಹುದು ಅಥವಾ ಮೊದಲು ನೆಲದ ಮೇಲೆ ಬಿದ್ದರೂ ಕಾಲಾನುಕ್ರಮದಲ್ಲಿ ಗಾಳಿ ಮತ್ತು ನೀರಿನಿಂದ ಸ್ಥಳಾಂತರಿಸಲ್ಪಟ್ಟು ಸಂಚಯನ ಪ್ರದೇಶಗಳನ್ನು ಸೇರುತ್ತವೆ. ಅಲ್ಲಿ ಸಂಚಯನಗೊಳ್ಳುತ್ತಿರುವ ಜೇಡಿ, ಮೆಕ್ಕಲು ಮರಳು ಮತ್ತು ನೋರಜುಗಳ ಜೊತೆ ಸೇರಿ ಒಂದು ವಿಧವಾದ ಸಂಕೀರ್ಣ ಜಲಜಶಿಲೆಗಳು ಉದ್ಭವಿಸುತ್ತವೆ. ಅಂಥ ಶಿಲೆಗಳಿಗೆ ಟುಫೇಷನ್ ಜಲಜಶಿಲೆಗಳೆಂದು ಹೆಸರು.
ಟುಫ್ ನಿಕ್ಷೇಪಗಳು ಪ್ರಪಂಚದ ವಿವಿಧ ಭಾಗಗಳಲ್ಲಿ ಬಹು ವ್ಯಾಪಕವಾಗಿ ವಿಸ್ತಾರಗೊಂಡಿವೆ. ಭೂ ಇತಿಹಾಸದಲ್ಲಿ ಜ್ವಾಲಾಮುಖಿ ಕ್ರಿಯೆಯಿಲ್ಲದ ಕಾಲವೇ ಇಲ್ಲವೆಂದರೆ ತಪ್ಪಾಗಲಾರದು. ಅಂದವೇಲೆ ಟುಫ್ ಶಿಲಾನಿಕ್ಷೇಪಗಳು ನಿರ್ಜೀವಿ ಕಲ್ಪದಿಂದ ಆಧುನಿಕ ಜೀವಿಕಲ್ಪದವರೆಗೆ ಎಲ್ಲ ಶಿಲಾಸ್ತೋಮಗಳಲ್ಲಿಯೂ ದೊರೆಯುತ್ತವೆ. ಆದರೆ ಬಹು ಪುರಾತನ ಟುಫ್‍ಗಳು ತಮ್ಮ ಮೂಲ ಸ್ಪಂಜು ರಚನೆಯನ್ನು ಕಳೆದುಕೊಂಡು ಗುರುತಿಸಲಾಗದಷ್ಟು ರೂಪಾಂತರ ಹೊಂದಿವೆ.