ಅತಿಪೂರೈಕೆ
ಅಂತರ್ದಹನಯಂತ್ರದ ಕೊಳವೆಯೊಳಕ್ಕೆ ಪ್ರವೇಶಿಸುವ ವಾಯುವಿನ ತೂಕ ಅಥವಾ ಸಾಂದ್ರತೆಯನ್ನು ಹೆಚ್ಚಿಸುವ ಕಾರ್ಯವಿಧಾನಕ್ಕೆ ಈ ಹೆಸರಿದೆ (ಸೂಪರ್ ಚಾರ್ಜಿಂಗ್). ಸಾಮಾನ್ಯವಾಗಿ ತಿದಿ (ಬ್ಲೋಯರ್) ಅಥವಾ ಅತಿಪೂರಕಗಳೆಂದು (ಸೂಪರ್ ಚಾರ್ಜರ್ಸ್) ಕರೆಯಲಾಗುವ ವಾಯುರೇಚಕ ಅಂದರೆ ಯಾವುದೇ ಧಾರಕದೊಳಕ್ಕೆ ವಾಯು ತುಂಬಲು ಇಲ್ಲವೇ ಅದರಿಂದ ವಾಯು ತೆಗೆಯಲು ಬಳಸುವ ಸಲಕರಣೆಯಿಂದ ಈ ಕೆಲಸ ಮಾಡಿಸಬಹುದು.
ಕಿಡಿಯಂತ್ರಗಳ ಅತಿಪೂರೈಕೆ
[ಬದಲಾಯಿಸಿ]ವಾಯುಮಂಡಲದ ಒತ್ತಡಕ್ಕಿಂತ ಅಧಿಕ ಒತ್ತಡದ ವಾಯುವನ್ನು ಚತುರ್ಘಾತ ಕಿಡಿಜ್ವಲನ ಯಂತ್ರದ (4-ಸ್ಟ್ರೋಕ್ ಸ್ಪಾರ್ಕ್ ಇಗ್‍ನಿಷನ್ ಎಂಜಿನ್) ಕೊಳವೆಯೊಳಕ್ಕೆ ಒದಗಿಸುವುದರಿಂದ ಅದರ ಗಾತ್ರಮಾಪಕ ದಕ್ಷತೆ (ವಾಲ್ಯುಮೆಟ್ರಿಕ್ ಎಫಿಷಿಯನ್ಸಿ) ತತ್ಪರಿಣಾಮವಾಗಿ ಆಂಶಿಕ ಅಥವಾ ಪೂರ್ಣವೇಗದಲ್ಲಿನ ಮಧ್ಯಮ ಪರಿಣಾಮಕಾರಿ ಒತ್ತಡವನ್ನು (ಮೀಡಿಯಂ ಎಫೆಕ್ಟಿವ್ ಪ್ರೆಷರ್) ಉತ್ತಮಗೊಳಿಸಬಹುದು.
ಚತುರ್ಘಾತದ ಕಿಡಿಜ್ವಲನ ಯಂತ್ರಗಳ ಅತಿಪೂರೈಕೆಗೆ ಇರುವ ಮೂರು ಪ್ರಮುಖ ಕಾರಣಗಳು
[ಬದಲಾಯಿಸಿ]1. ಯಂತ್ರದ ಅಧಿಕವೇಗದಲ್ಲಿ ಕ್ರಮೇಣ ಕಡಿಮೆಯಾಗುವ ಮಧ್ಯಸ್ಥಪ್ರಮಾಣ ಪರಿಣಾಮಕಾರಿ ಒತ್ತಡದ ಪ್ರಮಾಣವನ್ನು ಕಡಿಮೆ ಮಾಡುವುದು. 2 ಎತ್ತರ ಹೆಚ್ಚಿದಂತೆಲ್ಲ ಕಡಿಮೆಯಾಗುವ ವಾತಾವರಣದ ಸಾಂದ್ರತೆಯಿಂದಾಗಿ, ವಿಮಾನ ಹೆಚ್ಚು ಹೆಚ್ಚು ಎತ್ತರಕ್ಕೆ ಹಾರಿದಂತೆಲ್ಲ ಉಂಟಾಗುವ ಶಕ್ತಿನಷ್ಟವನ್ನು ತಡೆಗಟ್ಟುವುದು. 3 ಎಲ್ಲ ವೇಗಗಳಲ್ಲೂ ಅಧಿಕ ಭ್ರಾಮಕ (ಟಾರ್ಕ್) ಉತ್ಪಾದಿಸುವುದು.
ಎತ್ತರ ಹೆಚ್ಚಿದಂತೆ ವಾತಾವರಣದ ಒತ್ತಡ ತೀವ್ರವಾಗಿ ಕಡಿಮೆಯಾಗುತ್ತದೆ. ಇದಕ್ಕನುಗುಣವಾಗಿ ಅತಿಪೂರೈಕೆಯಿಲ್ಲದ ಕೊಂತದ (ಪಿಸ್ಟನ್) ವಿಮಾನ ಯಂತ್ರಗಳ ಶಕ್ತಿಯೂ ಇಳಿಮುಖವಾಗುತ್ತದೆ. ಅತಿಪೂರಕಗಳನ್ನು ಬಳಸುವುದರಿಂದ ಸಾಕಷ್ಟು ಎತ್ತರಗಳವರೆಗೂ ಒಳಹಾಯಿಕೆದ್ವಾರದ (ಇನ್‍ಲೆಟ್) ಬಳಿ, ಸಮುದ್ರ ಮಟ್ಟದಲ್ಲಿದ್ದಂತಹ ವಾಯುಸಾಂದ್ರತೆಯನ್ನು ಪಡೆಯಬಹುದು. ಕೆಲವು ವಿಮಾನಯಂತ್ರಗಳು ಅತಿಪೂರಕಗಳನ್ನು ಅಳವಡಿಸಿಕೊಂಡಿದೆ. ಇದರಿಂದಾಗಿ ಶೀಘ್ರವೇಗಬದಲಾವಣೆ ಸಾಧ್ಯವಾಗುವುದರಿಂದ, ಅತಿ ಹೆಚ್ಚಿನ ಅತಿಪೂರೈಕೆಯಾಗಿ ಶಕ್ತಿ ನಷ್ಟವಾಗುವ ಸಾಧ್ಯತೆಯನ್ನು ತಡೆಯಬಹುದು. ಅತಿಹೆಚ್ಚಿನ ಮಧ್ಯಮ ಪರಿಣಾಮಕಾರಿ ಒತ್ತಡದಿಂದಾಗಲೀ ಸ್ಫೋಟದಿಂದಾಗಲೀ ಉದ್ಭವಿಸಬಹುದಾದ ಅಪಾಯವನ್ನು ತಡೆಗಟ್ಟಲು, ಸಮುದ್ರಮಟ್ಟದಲ್ಲಿ, ಅತಿಪೂರೈಕೆಯಾದ ವಿಮಾನಯಂತ್ರಗಳ ನಿಯಂತ್ರಣ ಅತ್ಯವಶ್ಯ. ಅತ್ಯಧಿಕ ಪ್ರಮಾಣದ ಮಧ್ಯಮಪ್ರಮಾಣ ಪರಿಣಾಮಕಾರಿ ಒತ್ತಡವನ್ನು ಪಡೆಯಲು ಮತ್ತು ಉರುವಲಿನ ಮಿತವ್ಯಯ ದೃಷ್ಟಿಯಿಂದ, ಯಂತ್ರಗಳ ರಚನೆ, ಬಡಿತ (ನಾಕಿಂಗ್) ಶಬ್ದವಿಲ್ಲದೆ ಕಾರ್ಯ ನಡೆಸುವುದೆಂದು ನಿರೀಕ್ಷಿಸಲಾಗಿರುವ, ಉರುವಲಿನ ಮಹತ್ತಮ ಸಂಪೀಡನ ನಿಷ್ಪತ್ತಿಗೆ (ಹೈಯೆಸ್ಟ್ ಕಂಪ್ರೆಷನ್ ರೇಷಿಯೋ) ಅನುಗುಣವಾಗಿರಬೇಕಾಗುತ್ತದೆ. ಇಂಥ ಯಂತ್ರಗಳ ಪರಿಮಾಣಾತ್ಮಕ ಕಾರ್ಯ ಸಾಮಥ್ರ್ಯ ಹೆಚ್ಚಾದಾಗ ಅಧಿಕ ಆಕ್ಟೇನ್ ಸಂಖ್ಯೆಯ ಉರುವಲನ್ನು ಉಪಯೋಗಿಸದಿದ್ದಲ್ಲಿ ಅಥವಾ ದಟ್ಟಣಿಸುವಿಕೆಯ ಪ್ರಮಾಣವನ್ನು ಇಳಿಸದಿದ್ದಲ್ಲಿ ದಬದಬ ಶಬ್ದಕ್ಕೆಡೆಗೊಡುತ್ತದೆ. ಕಟ್ಟಣಿಸುವಿಕೆಯ ಪ್ರಮಾಣವನ್ನು ಇಳಿಸಿರುವಾಗ, ದಬದಬ ಶಬ್ದದಿಂದಾಗಿ ಸೀಮಿತಗೊಂಡಿರುವ ಮಧ್ಯಸ್ಥಪ್ರಮಾಣ ಪರಿಣಾಮಕಾರೀ ಒತ್ತಡವನ್ನು ಅತಿಪೂರೈಕೆಯಿಂದ ಹೆಚ್ಚಿಸಬಹುದು. ಆದರೆ ಇದರಿಂದಾಗಿ ಉಷ್ಣದಕ್ಷತೆ (ಥರ್ಮಲ್ ಎಫಿಷಿಯನ್ಸಿ) ಕುಗ್ಗುತ್ತದೆ. ಯಂತ್ರ ಉತ್ಪಾದನಾಶಕ್ತಿ ಮುಖ್ಯವಾಗಿರುವೆಡೆಗಳಲ್ಲಿ ಉರುವಲಿನ ಮಿತವ್ಯಯಕ್ಕಿಂತ, ಅತಿಪೂರೈಕೆಯೇ ಸೂಕ್ತಪರಿಹಾರ.
ಡೀಸೆಲ್ ಯಂತ್ರಗಳಲ್ಲಿ ಅತಿಪೂರೈಕೆ ಚತುರ್ಘಾತದ ಡೀಸೆಲ್ ಯಂತ್ರಗಳಲ್ಲಿ ಅತಿಪೂರೈಕೆಯಿಂದಾಗಿ ದಹನಕ್ರಿಯೆ ಭೌತಿಕವಾಗಿ ಉತ್ತಮಗೊಳ್ಳುತ್ತದೆ. ಹೆಚ್ಚು ಹೊಗೆಯಾಡುವ ಮತ್ತು ಸೂಕ್ತವೇಳೆಯಲ್ಲಿ ಹೊತ್ತಿಕೊಳ್ಳದ ಉರುವಲುಗಳು ಅತಿಪೂರೈಕೆಯಿಂದಾಗಿ ತೃಪ್ತಿಕರವಾಗಿ ಕೆಲಸ ಮಾಡಬಲ್ಲುವು.
ಅತಿಪೂರಕಗಳು ಯಾಂತ್ರಿಕವಾಗಿ ಕೆಲಸಮಾಡುವಾಗ, ಬಳಸುವ ಶಕ್ತಿ, ಯಂತ್ರದ ಉತ್ಪನ್ನದ ಮೇಲೆ ಪರಿಣಾಮ ಬೀರುತ್ತದೆ. ಅತ್ಯಧಿಕ ಕಾರ್ಯಸಾಮಥ್ರ್ಯವನ್ನು ಪಡೆಯಲು ಯಾವುದೇ ಯಂತ್ರಕ್ಕೆ ಒಂದು ನಿರ್ದಿಷ್ಟ ಪ್ರಮಾಣದಲ್ಲಿ ಮಾತ್ರ ಅತಿಪೂರೈಕೆ ನಡೆಯಬೇಕಾಗುತ್ತದೆ. ಹೆಚ್ಚಿನ ಅತಿಪೂರೈಕೆಯಾದಾಗ, ಪ್ರಮುಖವಾಗಿ ಕಡಿಮೆ ವೇಗಗಳಲ್ಲಿ, ಯಂತ್ರದಿಂದ ಗಳಿಸಬಹುದಾದ ಹೆಚ್ಚಿನ ಶಕ್ತಿಗಿಂತ ಅಧಿಕತರವಾದ ಶಕ್ತಿಯನ್ನು ಅತಿಪೂರಕವೇ ಬಳಸಿಕೊಳ್ಳುತ್ತದೆ. ಯಂತ್ರದ ನಿಷ್ಕಾಸ (ಎಗ್ಸಾಸ್ಟ್) ವ್ಯರ್ಥವಾಗಬಹುದಾದ ಶಕ್ತಿಯನ್ನು ಬಳಸಿಕೊಂಡು, ರೇಚಕಟರ್ಬೈನುಗಳ ಸಹಾಯದಿಂದ ಅತಿಪೂರಕಗಳನ್ನು ನಡೆಸುವುದು ಮತ್ತೊಂದು ವಿಧಾನ.[೧]
ಎರಡು ಘಾತಗಳ ಡೀಸೆಲ್ ಯಂತ್ರಗಳಿಗೆ ಅತಿಪೂರೈಕೆ ಮಾಡಬೇಕಾದಲ್ಲಿ ಸಂಪೀಡನ ಘಾತದ (ಕಂಪ್ರೆಷನ್ ಸ್ಟ್ರೋಕ್) ಮೊದಲು ನಿಷ್ಕಾಸ ನಿರ್ಬಂಧ ಅನಿವಾರ್ಯ. ಅದರಿಂದಾಗಿ ಕೇವಲ ಕೆಲವೇ ಯಂತ್ರಗಳಿಗೆ ಇದರ ಉಪಯೋಗ ಸೀಮಿತಗೊಂಡಿದೆ. ಸಾಮಾನ್ಯವಾಗಿ ಮಧ್ಯಮ ಪ್ರಮಾಣದ ಮತ್ತು ದೊಡ್ಡ ಪ್ರಮಾಣದ ಎರಡು ಘಾತದ ಡೀಸೆಲ್ ಯಂತ್ರಗಳು ಕಾರ್ಯಘಾತದ ಅನಂತರ ಕೊಳವೆಗಳನ್ನು ಸ್ವಚ್ಛಗೊಳಿಸಲು ಮತ್ತು ಅನಂತರದ ಘಾತುಗಳಿಗೆ ಬೇಕಾದ ವಾಯುವನ್ನೊದಗಿಸಲು ತಿದಿಗಳನ್ನು ಹೊಂದಿರುತ್ತವೆ. ಆದರೆ ಈ ತಿದಿಗಳು ಘಾತದ ಮೊದಲಿನಲ್ಲಿ, ಕೊಳವೆಗಳಲ್ಲಿ, ಅತಿಪೂರಕಗಳಷ್ಟು ಹೆಚ್ಚು ಒತ್ತಡನ್ನುಂಟುಮಾಡಲಾರವು.