ವಿಷಯಕ್ಕೆ ಹೋಗು

ಜೂವನಲ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಜೂವನಲ್ - 1-2ನೆಯ ಶತಮಾನ, ವ್ಯಂಗ್ಯಸಾಹಿತ್ಯಕ್ಕೆ ಪ್ರಖ್ಯಾತನಾದ ಈ ರೋಮನ್ ಕವಿಯ ಪೂರ್ಣ ಹೆಸರು ಜೂವನಲ್ ಡೆಸಿಮಸ್ ಜೂನಿಯಸ್ ಜೂವನಾಲಿಸ್ ಎಂದು.

ಬದುಕು

[ಬದಲಾಯಿಸಿ]

ಬಹುಶಃ ಈತ ಮಧ್ಯ ಇಟಲಿಯ ಅಕ್ವಿನಂ ನಗರದಲ್ಲಿ ಹುಟ್ಟಿದವನೆಂದು ಹೇಳಲಾಗಿದೆ. ಇವನ ಜೀವನ ಚರಿತ್ರೆಗಳು ಅನೇಕವಿದ್ದರೂ ಅವಾವುವೂ ನಂಬಲಾರ್ಹವಾದುವಲ್ಲ. ಸದ್ಯಕ್ಕೆ ಎಲ್ಲರೂ ಒಪ್ಪಿರುವ ಸಂಗತಿಗಳಿವು. ಜೂವನಲ್ ಒಬ್ಬ ಶ್ರೀಮಂತನ ಮಗ ಅಥವಾ ಸಾಕುಮಗ. ಆದರೆ ಈತ ತನ್ನ ವ್ಯಂಗ್ಯಕವನಗಳಲ್ಲಿ ಶ್ರೀಮಂತರ ಮೇಲೆ ಕಾರಿರುವ ವಿಷವನ್ನು ಗಮನಿಸಿದರೆ ಆಶ್ಚರ್ಯವಾಗುತ್ತದೆ. ಈತ ತನ್ನ ಕೃತಿಯನ್ನು ವೃದ್ಯಾಪ್ಯದಲ್ಲಿ ಪ್ರಕಟಿಸಿದನೆಂಬ ಸಂಗತಿಯೂ ಗಮನಾರ್ಹ. ಡಾಮಿಷಿಯನ್ ರಾಜನ ಪ್ರೀತಿಪಾತ್ರನಾಗಿದ್ದ ಪ್ಯಾರಿಸ್ ಎಂಬಾತನನ್ನು ಜೂವನಲ್ ತನ್ನೊಂದು ಪದ್ಯದಲ್ಲಿ ಲೇವಡಿ ಮಾಡಿದ್ದಾನೆಂಬ ಕಾರಣದಿಂದ ಸೈನ್ಯದ ನೌಕರಿಯ ನೆಪದಲ್ಲಿ ಕವಿಯನ್ನು ದೊರೆ ಈಜಿಪ್ಟಿಗೆ ರವಾನಿಸಿದ. ಅಲ್ಲಿ ತನ್ನ 80ನೆಯ ವಯಸ್ಸಿನಲ್ಲಿ ಮರಣಹೊಂದಿದ.

ಕೃತಿಗಳು

[ಬದಲಾಯಿಸಿ]

ಜೂವನಲ್ ಕವಿಯ ಕೃತಿಗಳು ಕೆಲವು ಸಂಗ್ರಹವಾಗಿ ಈಗ ನಮಗೆ ದೊರೆತಿವೆ. ಆ ಸಂಗ್ರಹಗಳೆಲ್ಲಾ ಒಂದೇ ಕಾಲದಲ್ಲಿ ಆದುವಲ್ಲ. ಅಲ್ಲದೆ ಕವಿ ತನ್ನ ಕೃತಿಗಳನ್ನು ಸಂಗ್ರಹಗಳ ಅನುಕ್ರಮಣಿಕೆಯಲ್ಲೇ ಬರೆದನೆಂದೂ ಭಾವಿಸಬೇಕಾಗಿಲ್ಲ. ಡಾಮಿಷಿಯನ್ ರಾಜನ ಕಾಲದ ಸಾರ್ವಜನಿಕರು, ಸಾಹಿತ್ಯ ಮತ್ತು ವೈಯಕ್ತಿಕ ಜೀವನಗಳ ವಿಡಂಬನೆಯೇ ಆ ಕೃತಿಗಳ ವಸ್ತು.

ಜೂವನಲ್ ಮೊದಲ ಪದ್ಯ ಸಂಗ್ರಹ (1-5) ಎರಡೆನೆಯ ಶತಮಾನದ ಆದಿಭಾಗಕ್ಕೆ ಸಂಬಂಧಿಸಿದ್ದು. ಮೊದಲನೆಯ ಪದ್ಯ ಪ್ರಸ್ತಾವನೆ ರೂಪದಲ್ಲಿದೆ. ಇಲ್ಲಿನ ಮೂರನೆಯ ಪದ್ಯ ರೋಂ ನಗರವನ್ನು ಕುರಿತದ್ದು. ಇದನ್ನು ಅನುಸರಿಸಿಯೇ ಜಾನ್ಸನ್ ತನ್ನ ಲಂಡನ್ ಎಂಬ ಪದ್ಯ ಬರೆದಿದ್ದು, ಜೂವನಲ್ ತನ್ನ ಪದ್ಯದಲ್ಲಿ ರೋಂ ಪಟ್ಟಣದ ಅನನುಕೂಲಗಳನ್ನೂ, ಅಪಾಯಗಳನ್ನೂ ಚೆನ್ನಾಗಿ ವರ್ಣಿಸಿದ್ದಾನೆ. ರಸ್ತೆಯಲ್ಲಾದ ಒಂದು ಅನಾಹುತ ಮತ್ತು ರಾತ್ರಿ ಸಂಚಾರಿಗಳನ್ನು ಹಿಡಿದ ಸನ್ನಿವೇಶಗಳ ವರ್ಣನೆಗಳು ಪ್ರಖ್ಯಾತವಾಗಿವೆ. ನಾಲ್ಕನೆಯ ಕವನ ಡಾಮೀಷಿಯನ್ ದೊರೆಯ ಮೀನಿಗೆ ಪ್ರೇತಗಳ ಗುಂಪು ಸುತ್ತಿಕೊಂಡಿರುವುದನ್ನು ಚಿತ್ರಿಸುತ್ತದೆ. ಐದನೆಯದು ಶ್ರೀಮಂತನ ಮನೆಯ ಭೊಜನಕೂಟದಲ್ಲಿ ಬಡವರಿಗಾದ ಅವಮಾನವನ್ನು ವರ್ಣಿಸುತ್ತದೆ.

ಎರಡನೆಯ ಸಂಗ್ರಹದಲ್ಲಿರುವ ಒಂದೇ ಕವಿತೆ 700 ಸಾಲುಗಳಷ್ಟು ದೊಡ್ಡದು. ಸ್ತ್ರೀ ವಿಡಂಬನೆಯೇ ಇದರ ವಸ್ತು. ನೇಣುಹಾಕಿಕೊಳ್ಳಲು ಹಗ್ಗ ಇರುವ ತನಕ, ಮದುವೆ ಏಕೆ ಆಗಬೇಕು ಎಂದು ಹೇಳಿ ಕವಿ ಸ್ತ್ರೀಯರಿಂದ ಆಗಬಹುದಾದ ಅನಾಹುತಗಳನ್ನೂ ಅವರ ಕೃತ್ರಿಮ ವಂಚನೆ, ದ್ರೋಹ, ಕ್ರೌರ್ಯ ಮುಂತಾದ ಅಪಾಯಗಳನ್ನೂ ರಾಣಿಯಿಂದ ಹಿಡಿದು ಬೀದಿಸೂಳೆಯವರೆಗಿನ ಹೆಂಗಸರನ್ನೆಲ್ಲ ಉದಾಹರಿಸಿ ಅತ್ಯಂತ ರಂಜನೀಯವಾಗಿ ಚಿತ್ರಿಸಿದ್ದಾನೆ.

ಮೂರನೆಯ ಸಂಗ್ರಹದ (7-9) ಏಳನೆಯ ಪದ್ಯದಲ್ಲಿ ಹೇಡ್ರೀಯನ್ ದೊರೆಯ ಆಳ್ವಿಕೆಯಲ್ಲಿ ಒಳ್ಳೆಯ ಕಾಲ ಬಂದೀತೆಂಬ ಹಾರೈಕೆ ಇದೆಯಾದರೂ ಅಂದು ಭಾಷಣ ಕಲೆ ಮತ್ತು ಸಾಹಿತ್ಯಸೇವೆ ಲಾಭದಾಯಕ ವೃತ್ತಿಗಳಾಗಲಿಲ್ಲವೆಂದು ಶೋಕ ವ್ಯಕ್ತವಾಗಿದೆ. ಎಂಟನೆಯ ಕವಿತೆಯಲ್ಲಿ ನಿನ್ನ ಸಾಧನೆ ನಿನ್ನ ಸ್ವಂತ ಸದ್ಗುಣಗಳಿಂದಲೇ ಹೊರತು, ನಿನ್ನ ವಂಶದ ಅಥವಾ ನಿನ್ನ ಪೂರ್ವಿಕರ ಕೀರ್ತಿಯಿಂದಲ್ಲ ಎಂಬ ಆಧ್ಯಾತ್ಮಿಕ ಧ್ಯೇಯ ಚಿತ್ರಣವಿದೆ. ನಾಲ್ಕನೆಯ ಸಂಗ್ರಹದಲ್ಲಿ (10-12) ಮೂರು ಕವಿತೆಗಳಿವೆ. ಹತ್ತನೆಯದು ಜಾನ್ಸನ್ನನ ವ್ಯಾನಿಟಿ ಆಫ್ ಹ್ಯೂಮನ್ ವಿಷಸ್ ಎಂಬ ಕೃತಿಗೆ ಮಾದರಿಯಾಯಿತು. ಜೂವನಲ್ ತನ್ನ ಪ್ರತಿಗಳಲ್ಲಿ ಆಸೆ-ದುರಾಶೆಗಳ ಹೋರಾಟವನ್ನು ಚಿತ್ರಿಸಿ ಅವನ್ನು ಸಾಧಿಸಿದವರಿಗೆ ಒದಗಿಬಂದ ದುರ್ಗತಿಯನ್ನು ತೋರಿಸಿದ್ದಾನೆ. ಹನ್ನೊಂದನೆಯ ಔತಣವನ್ನು ಟೀಕಿಸುವ ಕವಿತೆ, ಶ್ರೀಮಂತರ ಆಡಂಬರ, ಬಡವರ ಪ್ರೀತಿ ಎರಡರ ವ್ಯತ್ಯಾಸವನ್ನಿದು ಬಯಲಿಗೆಳೆದಿದೆ. ಹನ್ನೆರಡನೆಯದು ಪಿತ್ರಾರ್ಜಿತ ಆಸ್ತಿ ಹುಡುಕಾಡುವವನ ಚಿತ್ರ. ಐದನೆಯ ಸಂಗ್ರಹದಲ್ಲಿನ (13-16) ಹದಿನಾಲ್ಕನೆಯದು ತಂದೆತಾಯಿಗಳಿಂದ ಮಕ್ಕಳಿಗಾಗುವ ಒಳ್ಳೆಯ ಮತ್ತು ಕೆಟ್ಟ ಪರಿಣಾಮಗಳ ಚಿತ್ರ. 16ನೆಯದು ಅಪೂರ್ಣವಾಗಿದೆ. ವ್ಯಂಗ್ಯ ಕಾವ್ಯದ ಇತಿಹಾಸದಲ್ಲಿ ಜೂವನಲ್ಲನದು ಬಹುಮುಖ್ಯ ಹೆಸರು. ಇವನ ಕಾಲಕ್ಕಿಂತ ಮುಂಚೆ ವ್ಯಂಗ್ಯ ಕೇವಲ ತುಣಕು ಪದ್ಯಗಳಲ್ಲಿ ಮಾತ್ರ ಸಿಗುತ್ತಿತ್ತು. ನೀಳ್ಗವನಗಳಲ್ಲಿ ವ್ಯಂಗ್ಯವನ್ನು ತಂದ ಕೀರ್ತಿಗೆ ಜೂವನಲ್ ಭಾಜನ. ಇವನಲ್ಲಿ ಹಾಸ್ಯಕ್ಕಿಂತ ಕಟುತ್ವ, ದಯೆಗಿಂತ ಅಸಹಾಯಕತೆ ಪ್ರಮುಖವಾಗಿವೆ. ಎಷ್ಟೋ ವೇಳೆ ವ್ಯಂಗ್ಯದ ಹಿಂದಿನ ಕವಿಯ ಕೋಪ ತೀವ್ರವಾಗಿರುವುದನ್ನು ಕಾಣಬಹುದು. ಇಲ್ಲಿ ಮೆಚ್ಚಬೇಕಾದ ಗುಣವೆಂದರೆ ಈತ ಬಳಸಿರುವ ಅಭಿವ್ಯಕ್ತಿ ರೀತಿ, ಕವಿ ಮರೆಯಲಾರದಂಥ ವ್ಯಕ್ತಿಚಿತ್ರಗಳನ್ನು ಕೊಟ್ಟು, ಚರಿತ್ರೆಯ ವಿಕೃತ ಜನರನ್ನೂ ಅವರ ನಿತ್ಯಜೀವನದ ದೃಶ್ಯಗಳನ್ನೂ ತುಂಬಿಸಿ ಹಳೆಯ ರೋಂ ನಗರ ನಮ್ಮ ಕಣ್ಣುಮುಂದೆ ನಿಲ್ಲುವಂತೆ ಮಾಡಿದ್ದಾನೆ.


ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"https://kn.wikipedia.org/w/index.php?title=ಜೂವನಲ್&oldid=1081491" ಇಂದ ಪಡೆಯಲ್ಪಟ್ಟಿದೆ